ಮಡಿಕೇರಿ, ಮಾ. 27 : ಪ್ರಜಾ ಪ್ರಭುತ್ವದ ಅಳಿವು, ಉಳಿವು ಪ್ರತಿಯೊಬ್ಬರ ಮತದಾರರ ಕೈಯಲ್ಲಿದೆ, ಅತ್ಯಂತ ಶ್ರೇಷ್ಠದಾನಗಳಲ್ಲಿ ಮತದಾನವೂ ಒಂದು ಎಂದು ತಿಳಿದು ಪ್ರಜಾಪ್ರಭುತ್ವದ ನಿರ್ಣಾಯಕ ಅಳಿವು ಉಳಿವಿನ ಪ್ರಶ್ನೆಯಲ್ಲಿ ಚುನಾವಣೆ ಮಹತ್ತರ ಪಾತ್ರ ವಹಿಸಲಿರುವದರಿಂದ ಮತದಾನ ಮಾಡುವದು ನಮ್ಮ ಕರ್ತವ್ಯವಾಗಬೇಕೆಂದು ಪ್ರಜ್ಞಾ ಪ್ರವಾಹದ ಕ್ಷೇತ್ರೀಯ ಸಂಚಾಲಕ ರಘುನಂದನ್ ಜಿ ವ್ಯಾಖ್ಯಾನಿಸಿದ್ದಾರೆ.

ಮಡಿಕೇರಿಯ ಭಾರತೀಯ ವಿದ್ಯಾಭವನ ಸಭಾಂಗಣಲ್ಲಿ ಸಮರ್ಥ ಭಾರತ ಕೊಡಗು ವತಿಯಿಂದ ಮಂಗಳವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ 2014ರಿಂದ 2019ರವರೆಗಿನ ಭಾರತ ಪರಿವರ್ತನಾ ವಿಷಯದ ಕುರಿತು ಮಾತನಾಡಿದ ಅವರು, ಸಂವಿಧಾನದ ತಿದ್ದುಪಡಿ ಮತ್ತು ಬದಲಾವಣೆ ಕುರಿತಂತೆ ಎದ್ದಿರುವ ಊಹಾ ಪೋಹಗಳು ಅಪಪ್ರಚಾರಗಳು ಮತ್ತು ವಾದ ವಿವಾದಗಳ ಬಗ್ಗೆ ತಮ್ಮ ಮಾತನ್ನು ಆರಂಭಿಸಿ 1949ರಷ್ಟು ಹಿಂದೆಯೇ ಸಂವಿಧಾನ ರಚನಾ ಸಭೆಯಲ್ಲಿ ಏನೇನು ಚರ್ಚೆ ಮತ್ತು ಯಾವ ರೀತಿ ಸಂವಿಧಾನವನ್ನು ಅಳವಡಿಸಿಕೊಳ್ಳ ಲಾಯಿತು ಎಂಬುದರ ಬಗ್ಗೆ ಸಂವಿಧಾನ್ ಎಂಬ ಹತ್ತು ಧಾರವಾಹಿ ಗಳುಳ್ಳ ವಿವರಣೆ ಯೂಟೂಬ್‍ನಲ್ಲಿ ಲಭ್ಯವಿದೆ ಎಂದರು. ಸಂವಿಧಾನಕ್ಕೆ ಇಲ್ಲಿಯವರೆಗೆ ನೂರಕ್ಕೂ ಹೆಚ್ಚು ತಿದ್ದುಪಡಿಗಳು ಆಗಿವೆ ಎಂಬುದು ನಾವು ನೆನಪಿಡಬೇಕು ಎಂದು ರಘುನಂದನ್ ಜೀ ಉಲ್ಲೇಖಿಸಿದರು.

ಆದರೆ, ಡಾ. ಅಂಬೇಡ್ಕರ್ ಅವರ ಮಾತಿನಲ್ಲೇ ಹೇಳುವದಾದರೆ, ಸಂವಿಧಾನ ಎಷ್ಟೇ ಚೆನ್ನಾಗಿ ರೂಪಿತಗೊಂಡಿದ್ದರೂ, ಅದನ್ನು ನಿರ್ವಹಣೆ ಮಾಡುವವರು ಯೋಗ್ಯರಾಗಿರದಿದ್ದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ನಿರ್ವಹಣೆ ಕಷ್ಟ ಎಂದು ರಘುನಂದನ್ ಜಿ ಉಲ್ಲೇಖಿಸಿದರು.

1990ರ ವರೆಗೂ ದೇಶದಲ್ಲಿ ಚುನಾವಣೆ ಮತ್ತು ಮತದಾನ ಹೇಗಿತ್ತು ಎಂಬುದನ್ನು ಅನೇಕ ಉದಾಹರಣೆಗಳ ಮೂಲಕ ಉಲ್ಲೇಖಿಸಿದ ಅವರು, ಮುಖ್ಯ ಚುನಾವಣಾ ಅಧಿಕಾರಿಯಾಗಿ ಟಿಎನ್ ಶೇಷನ್ ಅವರು, ಬಂದ ಮೇಲಷ್ಟೆ ಚುನಾವಣೆ ಮತ್ತು ಮತದಾನಕ್ಕೆ ಜೊತೆಗೆ ಚುನಾವಣಾ ಆಯೋಗಕ್ಕೆ ಒಂದು ರೀತಿಯ ಗೌರವ ಮತ್ತು ಕ್ರಿಯಾಶೀಲತೆಯನ್ನು ಕೊಟ್ಟಿದ್ದಲ್ಲದೇ, ಪಾರದರ್ಶಕ ಮತ್ತು ನಿರ್ಭೀತ ಚುನಾವಣೆಯನ್ನು ನೋಡುವಂತಾಯಿತು ಎಂದು ಹೇಳಿದರು.

ರಕ್ತದಾನ, ನೇತ್ರದಾನದಂತೆ ಸ್ವಂತಕ್ಕೆ ಅಲ್ಲದೆ ಸಮಾಜದ ಒಳಿತಿಗಾಗಿ ಮಾಡುವ ಶ್ರೇಷ್ಠದಾನದಲ್ಲಿ ಮತದಾನವು ಒಂದು ಎಂದು ತಿಳಿದು, ನಾವೆಲ್ಲರೂ ಪ್ರಜಾಪ್ರಭುತ್ವದ ಅಂತ:ಶಕ್ತಿಯಾಗಿರುವ ಮತದಾನದಲ್ಲಿ ಸಕ್ರಿಯರಾಗಬೇಕು. ನಮ್ಮ ಮನೆ, ನಮ್ಮ ಸುತ್ತ ಮುತ್ತಲಿನವರನ್ನು ಮತದಾನ ಮಾಡುವಂತೆ ಸಕ್ರಿಯಗೊಳಿಸುವದು ಕೂಡ ದೇಶ ಸೇವೆಯೇ ಆಗಿವೆ ಎಂದು ರಘುನಂದನ್ ಜಿ ಕರೆ ನೀಡಿದರು. ಚುನಾವಣೆ ಮತ್ತು ಮತದಾನದ ವಿವರಗಳನ್ನು ವಾಟ್ಸ್‍ಆಪ್ ಮೂಲಕ ಪಡೆಯುವ ಹಿನ್ನೆಲೆಯಲ್ಲಿ ಮೊಬೈಲ್ ಸಂಖ್ಯೆ 7483819316ಕ್ಕೆ ಸಂದೇಶ ಕಳುಹಿಸಿ, ಪ್ರತಿಯೊಬ್ಬರನ್ನು ಮತದಾನದ ವಿಷಯದಲ್ಲಿ ಪ್ರಜ್ಞಾವಂತರನ್ನಾಗಿಸಬೇಕು ಎಂದು ಅವರು ಕರೆ ನೀಡಿದರು.

ಸಮಬಾಳು - ಸಮಪಾಲು

ಕಾರ್ಯಕ್ರಮದ ಸಂಚಾಲಕರಾದ ಡಾ. ಬಿ.ಸಿ ನವೀನ್ ಕುಮಾರ್ ಸ್ವಾಗತಿಸಿದರಲ್ಲದೇ, ಪ್ರಾಸ್ತಾವಿಕವಾಗಿ ಮಾತನಾಡಿ, ರಾಜಪ್ರಭುತ್ವದಿಂದ ಪ್ರಜಾಪ್ರಭುತ್ವಕ್ಕೆ ಬಂದಿರುವ ನಾವು 1947ರಲ್ಲಿ ಸ್ವಾತಂತ್ರ್ಯ ಪಡೆದು 1950ರಲ್ಲಿ ಸಂವಿಧಾನವನ್ನು ಪಡೆದು ಸಮಬಾಳು-ಸಮಪಾಲು ವ್ಯವಸ್ಥೆ ಯಲ್ಲಿದ್ದೇವೆ. ಆದರೆ, ಈ ಆಶಯ ಸಾಕಾರಗೊಳ್ಳಬೇಕಾದರೆ, ಪ್ರತಿಯೊಬ್ಬ ನಾಗರಿಕ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿನ ಆಗುಹೋಗುಗಳಿಗೆ ಸ್ಪಂದಿಸಬೇಕು, ಪ್ರಶ್ನೆ ಮಾಡುವಂತಿರಬೇಕು. ದುರದೃಷ್ಠವತ್, ನಮ್ಮಲ್ಲಿ ಮತದಾನ ಮಾಡಿದರೆ ನಮ್ಮ ಜವಾಬ್ದಾರಿ ಮುಗಿಯಿತು. ನಾಲ್ಕು ವರ್ಷ 364 ದಿನ ಕೇವಲ ಮಾತನಾಡುವದು, ಟೀಕೆ ಟಿಪ್ಪಣಿ ಮಾಡುವದು ಎಂಬ ಭಾವನೆ ಇದೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ದೆಹಲಿ ಮಟ್ಟದಲ್ಲಿ ತೀರ್ಮಾನಗಳು ಆಗುತ್ತಿದ್ದವು. ಆದರೆ, ಆಡಳಿತ ವಿಕೇಂದ್ರೀಕರಣ ಹಿನ್ನೆಲೆಯಲ್ಲಿ ಗ್ರಾಮ ಮಟ್ಟದಲ್ಲಿ, ಗ್ರಾಮ ಸಭೆ ಮತ್ತು ವಾರ್ಡ್ ಸಭೆಗಳ ಮೂಲಕ ತಮಗೆ ಬೇಕಾದ ವ್ಯವಸ್ಥೆಯನ್ನು ಪಡೆಯಲು ಅವಕಾಶವಿದೆ. ಮತದಾನ ಮಾಡುವ ಮೂಲಕ ದೇಶಕಟ್ಟುವ ಕೆಲಸದಲ್ಲಿ ನಾವು ಕೂಡ ಪಾಲುದಾರ ರಾಗಬೇಕೆಂದು ಡಾ.ನವೀನ್ ಕುಮಾರ್ ಮಾಹಿತಿ ನೀಡಿದರು.

ಸಮರ್ಥ ಭಾರತ ಪದಾಧಿಕಾರಿ ಕೆ.ಕೆ. ಮಹೇಶ್ ಕುಮಾರ್ ಕಾರ್ಯ ಕ್ರಮ ನಿರೂಪಿಸಿ, ವಂದಿಸಿದರು. ಕಾರ್ಯಕ್ರಮದಲ್ಲಿ, ಶಾಸಕ ಕೆ.ಜಿ. ಬೋಪಯ್ಯ, ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರು, ಸಾರ್ವಜನಿಕರು, ಆಸಕ್ತರು ಪಾಲ್ಗೊಂಡಿದ್ದರಲ್ಲದೇ, ರಘುನಂದನ್ ಜೀ ರೊಂದಿಗೆ ಸಂವಾದವನ್ನೂ ನಡೆಸಿದರು.