ಸುಂಟಿಕೊಪ್ಪ, ಮಾ. 26: ಸರಣಿ ಅವಘಡ ನಡೆಸಿ ವಾಹನಗಳಿಗೆ ಜಖಂಗೊಳಿಸಿ, ವ್ಯಕ್ತಿಯೋರ್ವನಿಗೆ ಗಾಯಗೊಳಿಸಿದ ಜೀಪು ಚಾಲಕ ಪರಾರಿಯಾದ ಘಟನೆ ಸಂಭವಿಸಿದೆ.

ತಾ.24 ರಂದು ಬೆಳಿಗ್ಗೆ ಗದ್ದೆಹಳ್ಳದ ರಸ್ತೆ ಬದಿ ನಿಲ್ಲಿಸಿದ ಮಾರುತಿ 800 ಕಾರಿಗೆ ಜೀಪು (ಸಿಎನ್‍ಜೆಡ್ 0784)ನ ಚಾಲಕ ಡಿಕ್ಕಿಪಡಿಸಿದ್ದಾನೆ. ಆನಂತರ ಜಖಂಗೊಂಡ ಮಾರುತಿ ಕಾರನ್ನು ಸರಿಪಡಿಸಿ ಕೊಡುವದಾಗಿ ಸಮಾಧಾನಪಡಿಸಿ ತೆರಳಿದ ಚಾಲಕ ಸಂಜೆ ಉಲುಗುಲಿ ರಸ್ತೆ ಬದಿ ನಿಲ್ಲಿಸಿದ ಮೋಟಾರ್ ಬೈಕ್‍ಗೆ ಗುದ್ದಿದಲ್ಲದೆ ಬೈಕ್‍ಗೆ ಹಾನಿಗೊಳಿಸಿ ಅಲ್ಲಿಂದ ಅಡ್ಡಾದಿಡ್ಡಿ ಜೀಪು ಚಾಲಿಸಿ ರಾಷ್ಟ್ರೀಯ ಹೆದ್ದಾರಿ 275 ರ ಕೆಇಬಿ ಬಳಿ ನಿಲ್ಲಿಸಿದ ಮಡಿಕೇರಿ ಗಣಪತಿ ಬೀದಿ ನಿವಾಸಿ ಫಹಾದ್‍ಖಾನ್ ಅವರ (ಕೆಎ12 ಎಂಎ4890) ರ ಬಲೋನೊ ಕಾರಿಗೆ ಗುದ್ದಿದ್ದು, ರಸ್ತೆ ಬದಿ ನಿಂತಿದ್ದ ಫಹದ್‍ಖಾನ್ ಅವರ ದೊಡ್ಡಮ್ಮ ಮಗ ಮನ್ಸೂರ್‍ಗೆ ಜೀಪು ಡಿಕ್ಕಿಯಿಂದ ಗಾಯವುಂಟಾಗಿದೆ. ಅಲ್ಲಿಂದ ನೇರವಾಗಿ ಜೀಪನ್ನು ನಿಲ್ಲಿಸದೆ ಗದ್ದೆಹಳ್ಳಕ್ಕೆ ಬಂದ ಜೀಪು ಚಾಲಕ ಅಲ್ಲಿ ನಿಲ್ಲಿಸಿದ್ದ ಜೆನ್ ಕಾರಿಗೂ ಒರೆಸಿಕೊಂಡು ಹೋಗಿ ಜೀಪನ್ನು ಗಿರಿಯಪ್ಪನ ಮನೆ ಬಳಿ ನಿಲ್ಲಿಸಿ ಪರಾರಿಯಾಗಿದ್ದಾರೆ.

ಫಹಾದ್‍ಖಾನ್ ಅವರು ಸುಂಟಿಕೊಪ್ಪ ಪೊಲೀಸರಿಗೆ ಜೀಪ್ ಚಾಲಕನನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ದೂರು ಸಲ್ಲಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ಘಟನೆಗೆ ಸಂಬಂಧಿಸಿದ ಜೀಪನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಗಾಯಗೊಂಡ ಮನ್ಸೂರ್ ಮಡಿಕೇರಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ

ಗ್ರಾಮಸ್ಥರ ಆರೋಪ: ಕಳೆದ 2 ವಾರದಿಂದ ಜೀಪ್ (ಸಿಎನ್‍ಜೆಡ್ 0784)ರ ಚಾಲಕ ಹೀಗೆ ಸಣ್ಣ ಪುಟ್ಟ ಅವಘಡ ನಡೆಸುತ್ತಿದ್ದು, ನಗರದಲ್ಲಿ ಅಡ್ಡಾದಿಡ್ಡಿ ಜೀಪು ಚಾಲಿಸಿ ಪಾದಚಾರಿಗಳಿಗೆ, ವಾಹನ ಚಾಲಕರಿಗೆ ಭಯಭೀತಿ ವಾತಾವರಣ ಸೃಷ್ಟಿಸಿದ್ದಾನೆ ಸ್ಥಳೀಯ ಪ್ರಭಾವಿ ರಾಜಕಾರಣಿಯೋರ್ವರ ಶ್ರೀರಕ್ಷೆಯಿಂದ ಈತ ಈ ರೀತಿ ಸ್ವೇಚ್ಛೆಯಿಂದ ವಾಹನ ಚಾಲಿಸುತ್ತಿದ್ದಾನೆ. ಈತನ ದುಂಡಾವರ್ತನೆಯಿಂದ ಪ್ರಾಣಹಾನಿ ಆಗುವ ಮುನ್ನ ಪೊಲೀಸರು ಜೀಪು ಚಾಲಕನನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.