ಕೂಡಿಗೆ, ಮಾ. 26: ತಂದೆ-ತಾಯಿಯನ್ನು ಮುಪ್ಪಿನ ವೇಳೆಯಲ್ಲಿ ಜೋಪಾನವಾಗಿ ನೋಡಿಕೊಳ್ಳುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ರಾಜ್ಯ ಅಧ್ಯಕ್ಷ ಎನ್. ಗುರುಸ್ವಾಮಿ ತಿಳಿಸಿದರು.
ಕೂಡಿಗೆಯ ಶ್ರೀಶಕ್ತಿ ವೃದ್ಧಾಶ್ರಮ ದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಅಶ್ವಥ್ ನಗರ ಭಾಸ್ಕರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತವಾದ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಕಾರ್ಯ ಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ಕೊಡಗು ಜಿಲ್ಲೆಯು ಪ್ರಕೃತಿ ವಿಕೋಪಕ್ಕೆ ತುತ್ತಾದ ಸಂದರ್ಭ ಕೇವಲ ಆಸ್ತಿ ಪಾಸ್ತಿಗಳನ್ನು ಅಲ್ಲದೆ ಕೆಲವು ಅಮೂಲ್ಯವಾದ ದಾಖಲಾತಿಗಳನ್ನು ಜನರು ಕಳೆದುಕೊಂಡಿದ್ದಾರೆ. ಆ ನಿಟ್ಟಿನಲ್ಲಿ ದಾಖಲಾತಿಗಳ ಮರು ನಿರ್ಮಾಣಕ್ಕೆ ಪ್ರತಿದಿನ ಕಚೇರಿಗೆ ಅಲೆಯುತ್ತಿರುವದು ತಪ್ಪುತ್ತಿಲ್ಲ. ಇಂತವರ ಧ್ವನಿಯಾಗಿ ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯು ಕಾರ್ಯ ನಿರ್ವಹಿಸಲಿದೆ. ಆ ನಿಟ್ಟಿನಲ್ಲಿ ಸೋಮ ವಾರಪೇಟೆ ತಾಲೂಕು ಹಾಗೂ ಕುಶಾಲನಗರದ ಕಾವೇರಿ ತಾಲೂಕಿನಲ್ಲಿ ಈಗಾಗಲೇ ಕಾರ್ಯಾರಂಭಗೊಂಡು ಸಾಮಾಜಿಕ ಕಳಕಳಿ ಹಿನ್ನೆಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಕಾರ್ಯಕ್ರಮದ ಮುಖ್ಯ ಅತಿಥಿ ಗಳಾಗಿ ಆಗಮಿಸಿದ್ದ ಕುಶಾಲನಗರ ಗ್ರಾಮಾಂತರ ಸಂಚಾರಿ ಠಾಣೆಯ ಸಹಾಯಕ ಠಾಣಾಧಿಕಾರಿ ಆಶಾ ಸುರೇಶ್ ಮಾತನಾಡಿ, ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯು ಹಲವು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಾಜಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವದು ತುಂಬಾ ಸಂತೋಷದಾಯಕವಾಗಿದೆ ಎಂದರು.
ಈ ಸಂದರ್ಭ ಪಿರಿಯಾಪಟ್ಟಣ ತಾಲೂಕು ಅಧ್ಯಕ್ಷ ಮಲ್ಲೇಶ್, ಮಾಧ್ಯಮ ಸಲಹೆಗಾರ ಕೆ.ಟಿ. ಶ್ರೀನಿವಾಸ್, ಕರ್ನಾಟಕ ಮಾನವ ಹಕ್ಕುಗಳ ಜನ ಜಾಗೃತಿ ವೇದಿಕೆಯ ಸೋಮ ವಾರಪೇಟೆ ತಾಲೂಕು ಹಾಗೂ ಕಾವೇರಿ ತಾಲೂಕು ಅಧ್ಯಕ್ಷ ಆರ್. ಗಿರೀಶ್, ತಾಲೂಕು ಕಾರ್ಯದರ್ಶಿ ಶಬೀರ್ ಅಹಮದ್, ಶ್ರೀಶಕ್ತಿ ವೃದ್ಧಾಶ್ರಮದ ಚಂದ್ರು, ಬೇಬಿ, ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟದ ಕೊಡಗು ಹಾಗೂ ಹಾಸನ ಜಿಲ್ಲಾ ಅಧ್ಯಕ್ಷ ಕೆ.ಆರ್. ಜಗದೀಶ್ ಸೇರಿದಂತೆ ಬೈಲುಕುಪ್ಪೆ ಹಾಗೂ ಕುಶಾಲನಗರ ವ್ಯಾಪ್ತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.