ಸೋಮವಾರಪೇಟೆ, ಮಾ. 26: ಕೂಲಿ ಕಾರ್ಮಿಕರು ಮುಕ್ತ ಹಾಗೂ ಒತ್ತಡ ರಹಿತ ಮತದಾನದಲ್ಲಿ ಪಾಲ್ಗೊಳ್ಳುವಂತಾಗಬೇಕು. ಯಾವದೇ ಪಕ್ಷ ಹಾಗೂ ವ್ಯಕ್ತಿಯ ಪರವಾಗಿ ಮತ ಚಲಾಯಿಸುವಂತೆ ಮತದಾರರಿಗೆ ಆಸೆ, ಆಂಕಾಕ್ಷೆಗಳನ್ನು ನೀಡಬಾರದು. ಮತದಾನ ದಿನದಂದು ಕಡ್ಡಾಯವಾಗಿ ಕಾರ್ಮಿಕರಿಗೆ ರಜೆ ನೀಡಬೇಕು ಎಂದು ಬೆಳೆಗಾರರಿಗೆ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ ಸೂಚನೆ ನೀಡಿದರು.

ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆಯೋಜಿಸಲಾಗಿದ್ದ ಕಾಫಿ ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸಕ್ತ ಸಾಲಿನಲ್ಲಿ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಮತದಾನ ಹೆಚ್ಚು ಮಾಡುವ ನಿಟ್ಟಿನಲ್ಲಿ ಮತದಾರರಲ್ಲಿ ಜಾಗೃತಿ ಉಂಟು ಮಾಡಲು ಕೇಂದ್ರ ಚುನಾವಣಾ ಆಯೋಗ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದಕ್ಕೆ ತಾಲೂಕಿನ ಎಲ್ಲ ಕಾಫಿ ಬೆಳೆಗಾರರು ಸಹಕಾರ ನೀಡಬೇಕು ಎಂದರು.

ಮದ್ಯ ಹಾಗೂ ಮಾಂಸಾಹಾರ ಊಟವನ್ನು ನೀಡಬಾರದು. ಮತದಾನಕ್ಕೆ ಯಾರನ್ನೂ ತಮ್ಮ ಸ್ವಂತ ವಾಹನದಲ್ಲಿ ಕರೆ ತರಬಾರದು. ಯಾವದೇ ರಾಜಕೀಯ ವ್ಯಕ್ತಿ ಗಳೊಂದಿಗೆ ಸಭೆ ಸಮಾರಂಭ ಮಾಡಲು ಇಲಾಖೆಯ ಪೂರ್ವಾನು ಮತಿ ಪಡೆದಿರಬೇಕು ಎಂದ ಅವರು, ಬೆಳೆಗಾರರ ವಿರುದ್ಧ ಚುನಾವಣೆಗೆ ಸಂಬಂಧಿಸಿದಂತೆ ಯಾವದೇ ದೂರುಗಳು ಬಂದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲಾಗುವದು ಎಂದು ಎಚ್ಚರಿಸಿದರು.

ತಾಲೂಕು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕಾಫಿ ತೋಟಗಳಲ್ಲಿ ಶಾಶ್ವತ ಕಾರ್ಮಿಕರು ನೆಲೆಸಿಲ್ಲ. ಹೊರಭಾU Àದಿಂದಲೇ ಕಾರ್ಮಿಕರು ಕೆಲಸಕ್ಕೆ ಬರುತ್ತಿದ್ದಾರೆ. ಚುನಾವಣೆಗೆ ಸಂಪೂರ್ಣ ಸಹಕಾರ ನೀಡುವದಾಗಿ ಹೇಳಿದರು.

ಸಭೆಯಲ್ಲಿ ಪ್ರೊಬೇಷನರಿ ಪಿಎಸ್‍ಐ ಪಿ.ಮೋಹನ್ ರಾಜ್, ಸಿಬ್ಬಂದಿಗಳಾದ ಜಗದೀಶ್, ಕಾಫಿ ಬೆಳೆಗಾರರಾದ ಬಸಪ್ಪ, ಪ್ರಕಾಶ್, ಬಿ.ಎಂ. ಲವ, ಪೂವಮ್ಮ, ವರಲಕ್ಷ್ಮೀ ಸಿದ್ದೇಶ್ವರ, ನೀಲಕಂಠ, ಅನಂತರಾಮ್ ಮತ್ತಿತರರು ಪಾಲ್ಗೊಂಡಿದ್ದರು.