ಕಿಗ್ಗಾಲುವಿನಲ್ಲಿ ಗಮನ ಸೆಳೆದ ಮನೆ ಮನೆ ಕಾವ್ಯಗೋಷ್ಠಿ

ಮಡಿಕೇರಿ, ಮಾ. 26: ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಐದನೆಯ ಕವಿಗೋಷ್ಠಿಯು ಭಾರತೀಯ ವಾಯುಪಡೆಯ ಮಾಜಿ ಯೋಧರು ಹಿರಿಯ ಕವಿ ಗಿರೀಶ್ ಕಿಗ್ಗಾಲು, ಶಶಿಕಲಾ ಗಿರೀಶ್ ಅವರ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಕ್ತಾ ರಂಜಿತ್ ಪ್ರಾರ್ಥಿಸಿದರು. ನಾಯಕಂಡ ಬೇಬಿ ಚಿಣ್ಣಪ್ಪ ಅವರ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಿ.ಆರ್. ರಾಮಚಂದ್ರ ರಾವ್ ಅವರು ಕವಿಗಳು ಒಂದೆಡೆ ಓದಿ ಪಡೆದ ಜ್ಞಾನವನ್ನು ಮತ್ತೊಂದು ಕಡೆಗೆ ಬರವಣಿಗೆಯ ಮೂಲಕ ಹಂಚುವ ಕೆಲಸ ಮಾಡುತ್ತಿದ್ದಾರೆ. ಅದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದೆ ಎಂದರು. ಸಂಚಾಲಕ ವೈಲೇಶ ಪಿ.ಎಸ್. ಅವರು ತಮ್ಮ ಆಶಯ ನುಡಿಗಳಲ್ಲಿ ಕವಿಗೋಷ್ಠಿಗಳು ಹಳ್ಳಿ ಹಳ್ಳಿಗಳ ಮನೆ ಮನೆಗೆ ತಲಪಿಸುವ ಕಾರ್ಯವನ್ನು ಮನೆ ಮನೆ ಕಾವ್ಯಗೋಷ್ಠಿ ಬಳಗದಿಂದ ಮಾಡುವ ಕೆಲಸ ನಿರಂತರವಾಗಿರುತ್ತದೆ ಎಂದರು. ಕ.ಸಾ.ಪ. ಜಿಲ್ಲಾ ಅಧ್ಯಕ್ಷ ಬಿ.ಎಸ್. ಲೋಕೇಶ್‍ಸಾಗರ್ ಮಾತನಾಡಿ ಕವಿ, ಸಾಹಿತಿಗಳು ಹೆಚ್ಚು ಹೆಚ್ಚು ಇಂತಹ ಕಾರ್ಯಕ್ರಮಗಳಲ್ಲಿ ಭಾಗವಹಿಸಿದಾಗ ತಮ್ಮ ಜ್ಞಾನದ ಬೆಳವಣಿಗೆ ಹೆಚ್ಚುತ್ತದೆ ಎಂದು ಹೇಳಿದರು. ಕೊಡಗು ಜಿಲ್ಲಾ ಲೇಖಕರ ಬಳಗದ ಅಧ್ಯಕ್ಷ ಎಂ.ಪಿ. ಕೇಶವ ಕಾಮತ್ ಮಾತನಾಡಿ, ಕನ್ನಡ ನಾಡಿನ ಸಾಹಿತಿಗಳು, ಕವಿಗಳ ರಚನೆಗಳನ್ನು ವಿವರಿಸುತ್ತಾ ಮಂಕುತಿಮ್ಮನ ಕಗ್ಗ ನಿಜಕ್ಕೂ ಕನ್ನಡದ ಭಗವದ್ಗೀತೆ ಎಂದು ಪುನರುಚ್ಚರಿಸಿದರು. ಮನು ಶೆಣೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಯಲಕ್ಷ್ಮಿ ಎಮ್ ಬಿ, ನಾಯಕಂಡ ಬೇಬಿ ಚಿಣ್ಣಪ್ಪ, ವೈಲೇಶ ಪಿ.ಎಸ್. ಕೊಡಗು, ಅಬ್ದುಲ್ಲಾ ಮಡಿಕೇರಿ, ನಾ ಕನ್ನಡಿಗ, ನರ್ಸರಿ ವಸಂತ, ಮೊಣ್ಣಂಡ ಶೋಭಾ ಸುಬ್ಬಯ್ಯ, ಲೀಲಾಕುಮಾರಿ ತೊಡಿಕಾನ, ಶಿವದೇವಿ ಅವನೀಶ್ಚಂದ್ರ, ಕಸ್ತೂರಿ ಗೋವಿಂದಮ್ಮಯ್ಯ, ಮಳುವಂಡ ನಳಿನಿ ಬಿಂದು, ಹರೀಶ್ ಸರಳಾಯ, ಚಕ್ಕೆರ ತ್ಯಾಗರಾಜ ಅಪ್ಪಯ್ಯ, ಬಿ.ಆರ್. ರಾಮಚಂದ್ರ ರಾವ್, ಬೈತಡ್ಕ ಜಾನಕಿ ಬೆಳ್ಯಪ್ಪ, ಪುದಿಯನೆರವನ ರೇವತಿ ರಮೇಶ್, ಗಿರೀಶ್ ಕಿಗ್ಗಾಲು, ಮುಕ್ತಾ ರಂಜಿತ್ ಕವನ ವಾಚನ ಮಾಡಿದರು. ಗಾಯಕ ಟಿ.ಡಿ. ಮೋಹನ್ ಅವರ ಗಾಯನಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ಕಲಾವಿದ ಸತೀಶ್ ಬಿ.ಆರ್. ಅವರು ಕುಂಚಗಾಯನ ನಡೆಸಿಕೊಟ್ಟರು. ಬಳಿಕ ಗಿರೀಶ್ ಕಿಗ್ಗಾಲು ನೆರೆದ ಎಲ್ಲಾ ಪ್ರೇಕ್ಷಕರು ಹಾಗೂ ಕವಿಗಳಿಗಾಗಿ ರಸ ಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಒಂಭತ್ತನೆಯ ತರಗತಿಯ ವಿದ್ಯಾರ್ಥಿ ಮಾಸ್ಟರ್ ಆಯುಷ್ ತಾನೊಬ್ಬ ಉತ್ತಮ ಗಾಯಕನಾಗುವ ಎಲ್ಲಾ ಲಕ್ಷಣಗಳನ್ನು ದೃಢಪಡಿಸಿದರು. ರಜತ್ ರಾಜ್ ಹಾಗೂ ನಾ ಕನ್ನಡಿಗ, ಮೊಣ್ಣಂಡ ಶೋಭಾ ಸುಬ್ಬಯ್ಯ, ಲೋಕೇಶ್ ಸಾಗರ್ ಇವರುಗಳು ಗೀತಗಾಯನ ಕಾರ್ಯಕ್ರಮದ ಅಂದವನ್ನು ಹೆಚ್ಚಿಸಿದರು. ಹರೀಶ್ ಕಿಗ್ಗಾಲು ನಿರೂಪಣೆ ಜೊತೆಗೆ ವಂದನಾರ್ಪಣೆ ಮಾಡಿದರು. ನಾ ಕನ್ನಡಿಗ ಮತ್ತು ಕವನ್ ಕುಮಾರ್ ನಿರ್ವಹಣೆ ಮಾಡಿದರು. ಮನೆ ಮನೆ ಕಾವ್ಯಗೋಷ್ಠಿ ಕುಟುಂಬದ ಮುಂದಿನ ಕಾರ್ಯಕ್ರಮವು ಏಪ್ರಿಲ್ ಏಳರಂದು ಸೋಮವಾರಪೇಟೆಯಲ್ಲಿ ಜರುಗಲಿದೆ ಎಂದು ಸಂಚಾಲಕ ವೈಲೇಶ ಪಿ.ಎಸ್. ತಿಳಿಸಿದ್ದಾರೆ.