ಸಿದ್ದಾಪುರ, ಮಾ. 26: ಮಳೆ ಅಭಾವ, ಕಾಲಮಾನ, ಕೀಟ ಬಾಧೆ, ಸೇರಿದಂತೆ ಕಾಫಿ ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ಸಿದ್ದಾಪುರ ಸುತ್ತಮುತ್ತಲಿನ ಬೆಳೆಗಾರರಿಗೆ ವಿಜ್ಞಾನಿಗಳಿಂದ ಮಾಹಿತಿ ನೀಡಲಾಗಿದೆ ಎಂದು ವೀರಾಜಪೇಟೆ ತಾಲೂಕು ಕಾಫಿ ಬೋರ್ಡ್ ಅಧಿಕಾರಿ ಸತೀಶ್ ಚಂದ್ರ ತಿಳಿಸಿದ್ದಾರೆ
ಗುಯ್ಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿ, ಕಾಫಿ ಬೆಳೆಗಾರರ ಹಲವು ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಫಿ ಬೋರ್ಡ್ ಮೂಲಕ ಅಗತ್ಯ ಸಲಹೆಗಳನ್ನು ನೀಡಲಾಗಿದೆ .ಮತ್ತಷ್ಟು ಮಾಹಿತಿಗಳು ಬೇಕಾದಲ್ಲಿ ಚೆಟ್ಟಳ್ಳಿ ಕಾಫಿ ಸಂಶೋಧನಾ ಕೇಂದ್ರಕ್ಕೆ ಭೇಟಿ ನೀಡಿ ಪಡೆದುಕೊಳ್ಳಬಹುದು ಹಾಗೂ ಕೃಷಿಗೆ ಸಂಬಂಧಿಸಿದ ಸಲಕರಣೆಗಳು, ಬಾವಿ, ಕೆರೆ ನಿರ್ಮಾಣ ಸೇರಿದಂತೆ ಹಲವು ಕಾರ್ಯಗಳಿಗೆ ಸಬ್ಸಿಡಿ ನೀಡಲಾಗುತ್ತಿದೆ ಇದನ್ನು ಸದುಪಯೋಗಪಡಿಸಿ ಕೊಳ್ಳಬೇಕೆಂದು ಕರೆ ನೀಡಿದರು.
ಗುಯ್ಯ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್. ವೆಂಕಟೇಶ್ ಮಾತನಾಡಿ, ಸಂಘದ ಮೂಲಕ ರೈತರಿಗೆ ಗೊಬ್ಬರ, ಸಲಕರಣೆಗಳು ನೀಡಲಾಗುತ್ತಿದ್ದು ಕೃಷಿಗೆ ಸಂಬಂಧಿಸಿದ ಮಾಹಿತಿಗಳನ್ನು ನೀಡುವ ನಿಟ್ಟಿನಲ್ಲಿ ಕಾಫಿ ಬೋರ್ಡ್‍ನ ವಿಜ್ಞಾನಿಗಳು ರೈತರಲ್ಲಿರುವ ಗೊಂದಲಗಳನ್ನು ನಿವಾರಣೆ ಮಾಡಿ ಕೃಷಿಕರಿಗೆ ಬೇಕಾದ ಮಾರ್ಗದರ್ಶನ ನೀಡಿ ಉತ್ತಮ ಇಳುವರಿ ಮಾಡುವ ಮೂಲಕ ಹೆಚ್ಚು ಲಾಭ ಹೊಂದಿ ಮುಂದೆ ಬರಬೇಕೆಂದರು.
ಈ ಸಂದರ್ಭ ಕಾಫಿ ಬೆಳೆಗಾರ ಹೇಮಚಂದ್ರ ಹಾಗೂ ಸಂಶೋಧನಾ ಕೇಂದ್ರದ ಅಧಿಕಾರಿಗಳು ಹಾಗೂ ಬೆಳೆಗಾರರು ಹಾಜರಿದ್ದರು.