ವೀರಾಜಪೇಟೆ, ಮಾ. 26: ಇಂದು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿರುವ ದೇಶದಲ್ಲಿ ಎಲ್ಲಾ ಕ್ಷೇತ್ರದಲ್ಲಿ ತನ್ನ ಇರುವಿಕೆಯನ್ನು ಮಹಿಳೆ ಗುರುತಿಸಿಕೊಂಡಿದ್ದಾಳೆ ಎಂದು ಕಾಫಿ ಮಂಡಳಿ ಉಪಾಧ್ಯಕ್ಷೆ ಪಟ್ಟಡ ರೀನಾ ಪ್ರಕಾಶ್ ಹೇಳಿದರು.

ವೀರಾಜಪೇಟೆಯ ಕೊಡಗು ಮಹಿಳಾ ಸಹಕಾರ ಸಂಘದ ವತಿಯಿಂದ ಮಹಿಳಾ ದಿನಾಚರಣೆ ಯನ್ನು ಆಚರಿಸಲಾಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೀನಾ ಪ್ರಕಾಶ್, ನದಿಗಳನ್ನು ಹೆಣ್ಣಿಗೆ ಹೋಲಿಸಲಾಗಿದೆ. ಇಂದು ಮಹಿಳೆ ಅಬಲೆಯಲ್ಲ ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ, ನಿವೃತ್ತ ಅಧಿಕಾರಿ ಲೀಲಾವತಿ ಮಹಿಳೆಯರಿಗಿರುವ ಅವಕಾಶಗಳು, ಸೌಲಭ್ಯಗಳ ಬಗ್ಗೆ ತಿಳಿಸಿಕೊಟ್ಟರು. ಮಹಿಳೆಯರಿಗೆ ಪ್ರೋತ್ಸಾಹ ಸಿಕ್ಕರೆ ಏನು ಬೇಕಾದರೂ ಸಾಧಿಸುತ್ತಾರೆ ಎಂದು ತಿಳಿಸಿದರು. ಈ ಸಂದರ್ಭ ಮಹಿಳೆಯರಿಗೆ ಹಲವು ಬಗೆಯ ಆಟೋಟ ಸ್ಫರ್ಧೆಗಳನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದ ಕೊನೆಯಲ್ಲಿ ಅವರಿಗೆ ಬಹುಮಾನ ವಿತರಣೆ ಮಾಡಲಾಯಿತು. ಕ್ರೀಡಾಪಟು ಚೇಮಿರ ಸೀತಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಸಹಕಾರ ಸಂಘದ ಅಧ್ಯಕ್ಷೆ, ಪಿ.ಬಿ. ಗೀತಾ, ಪದಾಧಿಕಾರಿಗಳು, ಮಾಜಿ ಅಧ್ಯಕ್ಷೆ ಕುಸುಮಾ ಸೋಮಣ್ಣ, ಹಿರಿಯರಾದ ವಸಂತಮ್ಮಾ ಮೊದಲಾದವರು ಉಪಸ್ಥಿತರಿದ್ದರು.