ಕೂಡಿಗೆ, ಮಾ. 25: ಸಮೀಪದ ಶಿರಂಗಾಲದಲ್ಲಿರುವ ಶ್ರೀ ಉಮಾಮಹೇಶ್ವರ ಸ್ವಾಮಿಯ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.

ರಥೋತ್ಸವದ ಅಂಗವಾಗಿ ಬೆಳಿಗ್ಗೆಯಿಂದಲೆ ದೇವಾಲಯದಲ್ಲಿ ವಿವಿಧ ಪೂಜಾ ವಿಧಿ ವಿಧಾನಗಳು ನೆರವೇರಿದವು.

ನಂತರ ವಿವಿಧ ಪುಷ್ಪಗಳಿಂದ ಅಲಂಕರಿಸಿದ್ದ ರಥದ ಒಳಗೆ ಸ್ವಾಮಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಬಳಿಕ ಮಧ್ಯಾಹ್ನ 12.45 ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ಗ್ರಾಮದ ಪ್ರಮುಖ ಬೀದಿಗಳಲ್ಲಿ ರಥದ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ರಥದ ಮುಂಭಾಗದಲ್ಲಿ ಡೊಳ್ಳುಕುಣಿತ, ಪೂಜಾಕುಣಿತ, ನಂದಿಧ್ವಜ, ಕಂಸಾಳೆ ವೀರಗಾಸೆ ವಿವಿಧ ಕಲಾತಂಡಗಳು ಇದ್ದವು.

ಈ ಸಂದರ್ಭ ಗ್ರಾಮಸ್ಥರು ಮನೆ ಮುಂಭಾಗಕ್ಕೆ ನೀರು ಹಾಕಿ ರಂಗೋಲಿ ಬಿಡಿಸಿ ರಥವನ್ನು ಬರಮಾಡಿಕೊಂಡರು.

ಗ್ರಾಮದಲ್ಲಿ ಮೂರು ರಸ್ತೆಗಳು ಕೂಡುವ ಮಧ್ಯದಲ್ಲಿ ರಥದ ಮುಂದೆ ಕರ್ಪೂರ ಬೆಳಕಿನಿಂದ ಓಂಕಾರವನ್ನು ರಚಿಸಿ ಭಕ್ತರು ಭಕ್ತಿಭಾವ ಮೆರೆದರು.

ಗ್ರಾಮದಲ್ಲಿ ಪ್ರದಕ್ಷಿಣೆ ನಡೆಸಿದ ಬಳಿಕ ರಥವನ್ನು ಸ್ವಸ್ಥಾನಕ್ಕೆ ಕೊಂಡೊಯ್ಯಲಾಯಿತು.

ರಥೋತ್ಸವದ ಬಳಿಕ ನೆರೆದಿದ್ದ ಭಕ್ತರಿಗೆ ಪಾನಕದ ವ್ಯವಸ್ಥೆ ಮತ್ತು ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಲೋಕೇಶ್, ಸಮಿತಿಯ ಪ್ರಮುಖರು, ಶಿರಂಗಾಲ ಗ್ರಾ.ಪಂ ಅಧ್ಯಕ್ಷ ರಮೇಶ್, ಸರ್ವ ಸದಸ್ಯರು, ವಿವಿಧ ಯುವಕ ಸಂಘಟನೆಯ ಪದಾಧಿಕಾರಿಗಳು ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.