ಮಡಿಕೇರಿ, ಮಾ. 25: ನಗರದ ಡೈರಿ ಫಾರಂ ಬಳಿಯಿರುವ ತೆರೆದ ಬಾವಿ ಹಾಗೂ ವಿವಿಧ ಕಡೆ ಹಾಳಾಗಿರುವ ಕೊಳವೆ ಬಾವಿಯನ್ನು ದುರಸ್ತಿ ಪಡಿಸಬೇಕು ಎಂದು ಆಗ್ರಹಿಸಿ ಮಡಿಕೇರಿ ನಗರದ ಹಿತರಕ್ಷಣಾ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ವೇದಿಕೆ ಅಧ್ಯಕ್ಷ ರವಿ ಗೌಡ ನಗರದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗುತ್ತಿದೆ. ಕೊಳವೆ ಬಾವಿ ಕೆಟ್ಟ ಬಳಿಕ ನೀರಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡಿದೆ. ಆದರೆ ನಗರಸಭೆ ನಿರ್ವಹಣೆಯ ಗೋಜಿಗೆ ಹೋಗದೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದರು.

ಎರಡು ವರ್ಷಗಳ ಹಿಂದೆ ನಗರದ ಸಾಕಷ್ಟು ವಾರ್ಡ್‍ಗಳಲ್ಲಿ ಕೊಳವೆ ಬಾವಿ ಕೊರೆಸಿ ಮೋಟರ್ ಅಳವಡಿಸಿದ್ದರೂ, ಸಾರ್ವಜನಿಕರಿಗೆ ಉಪಯೋಗವಾಗುತ್ತಿಲ್ಲ. ಈ ಬಗ್ಗೆ ಆಯಾ ವಾರ್ಡ್ ಸದಸ್ಯರಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಲವತ್ತುಕೊಂಡರು.

ಡೈರಿ ಫಾರಂ ಬಳಿ 20 ಅಡಿ ಸುತ್ತಳತೆಯ ಬಾವಿಯನ್ನು 20 ವರ್ಷಗಳ ಹಿಂದೆ ದಾನಿಯೊಬ್ಬರು ದಾನ ನೀಡಿದ್ದರೂ. ಇದರ ನಿರ್ವಹಣೆಯನ್ನು ವಹಿಸಿದ್ದ ನಗರಸಭೆ ಮಾತ್ರ ದುರಸ್ತಿಗೊಳಿಸಲು ಮುಂದಾಗುತ್ತಿಲ್ಲ. ಜತೆಗೆ ಅಳವಡಿಸಿದ್ದ ಪಂಪ್‍ಸೆಟ್ ಹಾಗೂ ಪೈಪ್‍ಗಳು ಕಳ್ಳರ ಪಾಲಾಗಿದೆ ಎಂದು ರವಿ ಗೌಡ ಅಸಮಾಧಾನ ವ್ಯಕ್ತ ಪಡಿಸಿದರು.

ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಲಾಗುವದು ಎಂದು ಹೇಳಿದರು. ವೇದಿಕೆಯ ಪದಾಧಿಕಾರಿಗಳಾದ ವಿನೋದ್, ನಾಗರತ್ನ, ಮೈಕಲ್ ವೇಗಸ್, ಜಗದೀಶ್ ಹಾಜರಿದ್ದರು.