ಕೊಡವ ಸಮುದಾಯದ ಹಕ್ಕುಬಾಧ್ಯತೆಗಳ ರಕ್ಷಣೆ ಅಗತ್ಯ

ವೀರಾಜಪೇಟೆ, ಮಾ. 25: ವಿಶ್ವದ ಪ್ರಮುಖ ರಾಷ್ಟ್ರಗಳ ಪೈಕಿ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವದ ಸಂವಿಧಾನ ವನ್ನು ಹೊಂದಿದೆ. ಈ ಸಂವಿಧಾನದಲ್ಲಿ ಇತರ ಸಮುದಾಯಗಳಂತೆ ಕೊಡವ ಸಮುದಾಯಕ್ಕೂ ಹಕ್ಕು ಬಾಧ್ಯತೆಗಳ ರಕ್ಷಣೆಯಾಗಬೇಕಾಗಿದೆ. ಇದರ ಅನುಸಾರ ಕೊಡಗಿನ ಕೊಡವ ಸಮುದಾಯ ಬುಡಕಟ್ಟು ಜನಾಂಗಕ್ಕೆ ಸೇರ್ಪಡೆಯ ಆದ್ಯತೆ ಕಲ್ಪಿಸಬೇಕಾಗಿದೆ ಎಂದು ಕೊಡವ ನ್ಯಾಷನಲ್ ಕೌನ್ಸಿಲ್‍ನ ಸಂಚಾಲಕ ನಂದಿನೆರವಂಡ ನಾಚಪ್ಪ ಹೇಳಿದರು. ವೀರಾಜಪೇಟೆ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಪೊಮ್ಮಕ್ಕಡ ಒಕ್ಕೂಟದಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಭಾರತದ ಸಂವಿಧಾನದಲ್ಲಿ ಕೊಡವ ಜನಾಂಗಕ್ಕೆ ಬೇಕಾಗಿರುವ ಎಲ್ಲ ಹಕ್ಕು ಬಾಧ್ಯತೆಗಳನ್ನು ನೀಡಲಾಗಿದೆ. ಕೊಡವರು ಸಂವಿಧಾನಾತ್ಮಕವಾಗಿ ಹಕ್ಕುಗಳನ್ನು ಪಡೆಯಲು ಎಲ್ಲ ಅರ್ಹತೆ ಗಳಿದ್ದರೂ ಅದನ್ನು ಸಮುದಾಯದ ಒಮ್ಮತದ ಹೋರಾಟದಿಂದಲೇ ಆಗಬೇಕು. ಕೊಡವ ಸಮುದಾಯದ ಹಕ್ಕಿಗಾಗಿ ಹೋರಾಟ ನಡೆಸುವಾಗ ಹಲವಾರು ಅಡೆತಡೆಗಳು ನಿರಂತರವಾಗಿ ಬಂದಿದೆ. ಅದನ್ನೆಲ್ಲಾ ಮೆಟ್ಟಿ ನಿಂತು ಹೋರಾಟವನ್ನು ಮುಂದುವರೆಸುತ್ತಿದ್ದೇನೆ. ಪ್ರಾರಂಭದಲ್ಲಿ ಎಲ್ಲ ಜನಾಂಗದವರನ್ನು ಒಗ್ಗೂಡಿಸಿ ಹೋರಾಟವನ್ನು ಮುಂದುವರೆಸಿದ್ದೆ. ನಂತರದ ದಿನಗಳಲ್ಲಿ ಇತರ ಸಮುದಾ ಯದವರು ಇದನ್ನು ನಿರ್ಲಕ್ಷಿಸಿದಾಗ ಪ್ರಜಾಪ್ರಭುತ್ವದ ಹಕ್ಕು ಬಾಧ್ಯತೆಗಳನ್ನು ಅವಲೋಕಿಸಿ ಕೇವಲ ಕೊಡವ ಜನಾಂಗಕ್ಕೆ ಸೀಮಿತವಾಗುವಂತಹ ಹಕ್ಕು ಬಾಧ್ಯತೆಗಳ ರಕ್ಷಣೆಗೆ ಹೋರಾಟವನ್ನು ನಡೆಸುತ್ತಿದ್ದೇನೆ. ಇದರಿಂದ ಯಾರು ತನ್ನನ್ನು ಬೊಟ್ಟು ಮಾಡುವಂತಿಲ್ಲ ಎಂದರು.

ಸಮಾರಂಭದಲ್ಲಿ ಅತಿಥಿಯಾಗಿ ಭಾಗವಹಿಸಿದ್ದ, ಮ್ಯೆಸೂರು ಬುಡಕಟ್ಟು ಸಂಶೋಧನಾ ಅಧ್ಯಯನ ಕೇಂದ್ರದ ಮುಖ್ಯಸ್ಥ ಡಾ. ನವೀನ್ ಮಾತನಾಡಿ, ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು. ನಾಚಪ್ಪ ಅವರು ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ಅರ್ಜಿಯ ಮೇರೆಗೆ ಕಳೆದ ಜನವರಿ 12 ರಿಂದ ಕೊಡಗಿನ ಮೂಲೆ ಮೂಲೆಗಳಲ್ಲಿ ಕೊಡವರ ಕುಲಶಾಸ್ತ್ರ ಅಧ್ಯಯವನ್ನು ನಡೆಸಲಾಗುತ್ತಿದೆ. ಈಗಾಗಲೇ ಬಹುತೇಕ ಕುಟುಂಬಗಳ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಮಾಹಿತಿ ಸಂಗ್ರಹ ಕಾರ್ಯ ಪ್ರಗತಿಯಲ್ಲಿದ್ದು, ಸಂಪೂರ್ಣ ಕಾರ್ಯ ಮುಗಿದ ನಂತರ ರಾಜ್ಯ ಹಾಗೂ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವದು ಎಂದು ಹೇಳಿದರು.

ಕೊಡವ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಮಾತನಾಡಿ, ನಮ್ಮಲ್ಲಿ ಒಗ್ಗಟ್ಟು ಹಾಗೂ ಕಲೆ ಸಾಹಿತ್ಯ, ಸಂಸ್ಕøತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿ ತಿಂಗಳು ಇಂತಹ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇವೆ. ನಮ್ಮಲ್ಲಿರುವ ಆಸ್ತಿ, ಅಂತಸ್ತು, ಒಣ ಪ್ರತಿಷ್ಠೆಯನ್ನು ಬದಿಗೊತ್ತಿ ಮುಂದಿನ ಪೀಳಿಗೆಗೆ ಕೊಡವತನ, ಪರಂಪರೆ, ಆಚಾರ ವಿಚಾರ ಹಾಗೂ ಸಂಸ್ಕøತಿಯನ್ನು ಉಳಿಸುವ ಕಾರ್ಯ ಆಗಬೇಕು ಎಂದು ಹೇಳಿದರು.

ಈ ಸಂದರ್ಭ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ, ಕೊಡವ ನ್ಯಾಷನಲ್ ಕೌನ್ಸಿಲ್‍ನ ಅಧ್ಯಕ್ಷ ನಂದಿನೆರವಂಡ ನಾಚಪ್ಪ, ಶತಾಯುಷಿ ಕಾಣತಂಡ ಬೆಳ್ಳಿಯವ್ವ, ಅಂತರ ರಾಷ್ಟ್ರೀಯ ಅಥ್ಲೇಟ್ ಮುಲ್ಲೇರ ಪೊನ್ನಮ್ಮ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ವೇದಿಕೆಯಲ್ಲಿ ಉಪಾಧ್ಯಕ್ಷೆ ಪಳೆಯಂಡ ಮನು ಸುಬ್ಬಯ್ಯ, ಖಜಾಂಚಿ ಪೊಯ್ಯೇಟಿರ ಭಾನು ಭೀಮಯ್ಯ, ಚಲ್ಮಂಡ ಗೌರಿ, ಕುಪ್ಪಂಡ ಪುಷ್ಪಾ ಮುತ್ತಣ್ಣ, ಉಪಸ್ಥಿತರಿದ್ದರು. ಇದೇ ಸಂದರ್ಭ ನೀಲಕ್ಕ ತಂಡದಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿತು. ಗೌರವ ಕಾರ್ಯದರ್ಶಿ ಬಯವಂಡ ಇಂದಿರಾ ಕಾರ್ಯಕ್ರಮ ನಿರೂಪಿಸಿದರು.