ಗೋಣಿಕೊಪ್ಪ ವರದಿ, ಮಾ. 25: ಹಳ್ಳಿಗಟ್ಟು ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ರಾಜ್ಯಮಟ್ಟದ ಅನ್ವೇಷಣೆ-19 ಮಾದರಿ ಪ್ರಯೋಗ ಸ್ಪರ್ಧೆಯಲ್ಲಿ ಕಸದಿಂದ ಇಂಟರ್‍ಲಾಕ್ ತಯಾರಿ ಮಾದರಿ ಪ್ರಥಮ ಬಹುಮಾನ ಗಿಟ್ಟಿಕೊಂಡಿತು.

ಸಿವಿಲ್ ಇಂಜಿನಿಯರ್ ವಿಭಾಗದಲ್ಲಿ ಉಜಿರೆ ಎಸ್‍ಡಿಎಂ ಪಾಲಿಟೆಕ್ನಿಕ್ ಕಾಲೇಜಿನ ತಂಡ ಪ್ರಯೋಗ ನಡೆಸಿದ ಕಸದಿಂದ ಇಂಟರ್‍ಲಾಕ್ ನಿರ್ಮಾಣ ಮಾದರಿ ಪ್ರಥಮ ಸ್ಥಾನ ಪಡೆದುಕೊಂಡಿತು. ಮೂಡಬಿದ್ರೆ ಎಸ್‍ಎನ್‍ಎಂ ಪಾಲಿಟೆಕ್ನಿಕ್ ಕಾಲೇಜು ರಚಿಸಿದ ಬೈಂಡರ್ ಬ್ಲಾಕ್ಸ್ ನಿರ್ಮಾಣದ ಮಾದರಿ ದ್ವಿತೀಯ ಸ್ಥಾನ ಪಡೆಯಿತು.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಿಂದ ಬೆಂಗಳೂರು ಸಿಟಿ ಎನ್‍ಟಿಟಿಎಫ್ ತಂಡದ ಐಒಟಿ ಬೇಸ್‍ಡ್ ಸ್ಮಾರ್ಟ್ ಹಬ್ ನಿರ್ಮಾಣ ಪ್ರಥಮ, ಮುರುಡೇಶ್ವರಾ ಆರ್‍ಎನ್ ಎಲೆಕ್ಟ್ರಾನಿಕ್ಸ್ ತಂಡದ ಬಾಂಬ್ ನಿಷ್ಕ್ರೀಯ ಮಾದರಿ ದ್ವಿತೀಯ ಸ್ಥಾನ ಪಡೆಯಿತು.

ಕಂಪ್ಯೂಟರ್ ಸೈನ್ಸ್ ಹಾಗೂ ಇಂಜಿನಿಯರಿಂಗ್ ವಿಭಾಗದಲ್ಲಿ ಬೆಂಗಳೂರು ಎಂಇಐ ಪಾಲಿಟೆಕ್ನಿಕ್ ಕಾಲೇಜು ತಂಡ ರೋಬೊಟ್ ಆಧಾರಿತ ನೆಲೆಹಾಸು ಸ್ವಚ್ಛತೆಯ ಮಾದರಿ ಪ್ರಥಮ, ಮೈಸೂರು ವಿದ್ಯಾವರ್ಧನ ಕಾಲೇಜು ತಂಡದ ಭವಿಷ್ಯದಲ್ಲಿ ಮನೆ ನಿರ್ವಹಣೆಯಲ್ಲಿನ ಮಾದರಿ ದ್ವಿತೀಯ ಸ್ಥಾನ ಪಡೆಯಿತು.

ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಉಜಿರೆ ಎಸ್‍ಡಿಎಂ ಕಾಲೇಜಿನ ತೆಂಗಿನಕಾಯಿ ಸುಲಿಯುವ ಯಂತ್ರಕ್ಕೆ ಪ್ರಥಮ ಸ್ಥಾನ, ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಸಿಎನ್‍ಸಿ ಮಿಲ್ಲಿಂಗ್ ಯಂತ್ರ ದ್ವಿತೀಯ ಸ್ಥಾನ ಪಡೆಯಿತು.

ಸಿವಿಲ್ ಇಂಜಿನಿಯರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಮೆಕಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗ ಪಾಲಿಟೆಕ್ನಿಕ್ ಕಾಲೇಜಿನ ಸುಮಾರು 400 ವಿದ್ಯಾಥಿಗಳು ಪಾಲ್ಗೊಂಡು ತಮ್ಮದೇ ಆದ ಚಿಂತನೆಯಲ್ಲಿ ಅನ್ವೇಷಣೆ ಹೊರ ಹಾಕಿದರು. ಮೈಸೂರು ಜೆಎಸ್‍ಎಸ್ ವಿಶೇಷಚೇತನ ಕಾಲೇಜು ತಂಡದ ವಿಶೇಷಚೇತನರುಗಳಾದ ಶರತ್‍ಕುಮಾರ್, ರಕ್ಷಿತಾ ರಾಜ್, ಮುರಳಿಧರ್, ಮಿಥುನ್ ಬರಿಗಿದಾದ್, ಜಿ.ಆರ್. ಹೇಮಾ. ಪುಟ್ಟಪ್ಪ, ಸರಸ್ವತಿ, ಪ್ರವೀಣ್ ಚಿಂತನೆಯಲ್ಲಿ ಅನಾವರಣಗೊಂಡ ಮಾದರಿಗಳು ಮೆಚ್ಚುಗೆ ಪಡೆದು ಪ್ರೋತ್ಸಾಹಕರ ಬಹುಮಾನ ಗಿಟ್ಟಿಸಿಕೊಂಡಿತು.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಯಾಂತ್ರಿಕೃತ ಬಾಗಿಲು ಚಾಲನೆ ಯಂತ್ರ ಹಾಗೂ ಅಪಘಾತ ಸಂದರ್ಭ ತಮ್ಮನ್ನು ರಕ್ಷಿಸಿಕೊಳ್ಳಲು ಹಾಗೂ ಬೇರೆಯವರಿಗೆ ಅಪಘಾತದ ಸುಳಿವು ದೊರೆಯುವಂತಹ ತಂತ್ರಜ್ಞಾನ ಅನಾವರಣಗೊಳಿಸಿದ ಸ್ಮಾರ್ಟ್ ಜಾಕೆಟ್ ತಂತ್ರಜ್ಞಾನ ಬಹುಮಾನ ಗಿಟ್ಟಿಕೊಂಡಿತು. ಇದರೊಂದಿಗೆ ಸೈನ್ ಲ್ಯಾಂಗ್ವೇಜ್ ಮತ್ತು ಬ್ಲೂಟೂತ್ ಮೂಲಕ ಮನೆ ನಿರ್ವಹಣೆ ತಂತ್ರಜ್ಞಾನ ಕೂಡ ಬಹುಮಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾಯಿತು.

ಸಮಾರೋಪ ಕಾರ್ಯಕ್ರಮದಲ್ಲಿ ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಚೆಪ್ಪುಡೀರ ಪಿ. ಬೆಳ್ಯಪ್ಪ, ಖಜಾಂಚಿ ಕೆ. ಎನ್. ಉತ್ತಪ್ಪ, ಪ್ರಾಂಶುಪಾಲ ಡಾ. ಪಿ.ಸಿ. ಕವಿತಾ ಕಾರ್ಯಕ್ರಮ ಸಂಯೋಜಕ ಡಾ. ಎಸ್.ಎಸ್. ದಿವಾಕರ್ ಬಹುಮಾನ ವಿತರಣೆ ಮಾಡಿದರು. ಕೊಡವ ಎಜುಕೇಶನ್ ಸೊಸೈಟಿ ಅಧ್ಯಕ್ಷ ಚೆಪ್ಪುಡೀರ ಪಿ. ಬೆಳ್ಯಪ್ಪ ಮಾತನಾಡಿ, ಯುವ ವಿಜ್ಞಾನಿಗಳ ಮಾದರಿಗಳು ವೈಜ್ಞಾನಿಕವಾಗಿ ಮಾನವ ಜೀವನದಲ್ಲಿ ಪ್ರಮುಖ ಪಾತ್ರವಹಿಸುವಂತೆ ಮಾಡುವಂತಿದೆ. ಅವಿಷ್ಕಾರಗಳು ಮಾನವನ ಬದುಕಿನ ಪ್ರತಿ ಹೆಜ್ಜೆಗೂ ಅವಶ್ಯಕವಾಗಿದೆ. ವೈಜ್ಞಾನಿಕವಾಗಿ ಪ್ರತೀ ಬದಲಾವಣೆ ಸಮಾಜಕ್ಕೆ ಅನಿವಾರ್ಯ ಎಂಬಂತಾಗಿದೆ. ಇಷ್ಟೊಂದು ಪ್ರತಿಭೆಗಳಿಗೆ ನಾವು ವೇದಿಕೆ ಕಲ್ಪಿಸಿರುವದು ಹೆಚ್ಚು ಪ್ರೋತ್ಸಾಹ ನೀಡಿದಂತಾಗಿದೆ ಎಂದರು.