ಮಡಿಕೇರಿ, ಮಾ. 25: ಕುಟಂಬ ನಿರ್ವಹಣೆಯಲ್ಲಿ ಮಹಿಳೆಯ ಪಾತ್ರ ಮಹತ್ವದಾಗಿದೆ ಎಂದು ಆರ್ಟ್ ಆಫ್ ಲಿವಿಂಗ್‍ನ ಸಾಮಾಜಿಕ ಕಾರ್ಯಕರ್ತೆ ಲಕ್ಷ್ಮಿ ರಾಜಪ್ಪ ಅಭಿಪ್ರಾಯ ಪಟ್ಟರು.
ಇಲ್ಲಿಗೆ ಸಮೀಪದ ಕಾವೇರಿ ಕಾಲೇಜು ಗೋಣಿಕೊಪ್ಪದ ಮಹಿಳಾ ಘಟಕ ಮತ್ತು ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯುಕ್ತ ಆಶ್ರಯದಲ್ಲಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಲಕ್ಷ್ಮಿ ರಾಜಪ್ಪ, ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಆದರ್ಶ ವ್ಯಕ್ತಿಗಳನ್ನು ಇಟ್ಟುಕೊಳ್ಳಬೇಕು. ಪ್ರತಿಯೊಬ್ಬ ಮಹಿಳೆಯು ಸ್ವ-ಉದ್ಯೋಗ ಮಾಡಬೇಕು. ಮಹಿಳೆಗೆ ಅನೇಕ ಒತ್ತಡಗಳು ಬರುತ್ತವೆ ಆದರೆ ಅದನ್ನು ಕಡಿಮೆ ಮಾಡಿಕೊಂಡು ಜೀವನ ನಡೆಸಿದರೆ ಮಾತ್ರ ಕುಟುಂಬ ನಿರ್ವಹಣೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಮಹಿಳಾ ಘಟಕದ ಸಂಚಾಲಕರು ಹಾಗೂ ಆಂಗ್ಲ ವಿಭಾಗದ ಮುಖ್ಯಸ್ಥ ಪ್ರೊ. ತೀತಮಾಡ ಪೂವಮ್ಮ ಮಾತನಾಡಿ, ಹೆಣ್ಣು ಮಕ್ಕಳು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕಾದರೆ ಭಯ ಬಿಟ್ಟು ಎಲ್ಲರೊಂದಿಗೆ ಬೆರೆತು ಶಾಂತಿ ಸಮಾಧಾನದಿಂದ ವರ್ತಿಸಬೇಕು ಎಂದರು. ಕಾರ್ಯಕ್ರಮದಲ್ಲಿ ಎನ್.ಎಸ್.ಎಸ್. ಯೋಜನಾಧಿಕಾರಿಗಳಾದ ಎಂ.ಎನ್. ವನಿತ್ ಕುಮಾರ್ ಮತ್ತು ಎನ್.ಪಿ. ರೀತಾ, ಆರ್ಟ್ ಆಫ್ ಲಿವಿಂಗ್ ಕಾರ್ಯಕರ್ತೆ ಗೀತಾ ಗಿರೀಶ್, ಕಾಲೇಜಿನ ಉಪನ್ಯಾಸಕರು ಹಾಗೂ ಕಾಲೇಜು ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಕಾವೇರಮ್ಮ ಕೆ.ಜೆ. ಸ್ವಾಗತಿಸಿ, ಕಾವೇರಮ್ಮ ಎ.ಜೆ. ವಂದಿಸಿದರು.