ಸೋಮವಾರಪೇಟೆ, ಮಾ. 25: ಬಿಸಿಲಿನ ಝಳ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಕೃಷಿ ಕಾರ್ಯ ಸೇರಿದಂತೆ ಹಲವೆಡೆ ಈಗಾಗಲೇ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿದೆ. ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಯ ಹನಿಗಳ ಸಿಂಚನವಾಗದೇ ಕೃಷಿ ಕಾರ್ಯಗಳೂ ಹಿಂದೆ ಬಿದ್ದಿವೆ. ಈ ಹಿನ್ನೆಲೆ ಮಳೆ ಕರುಣಿಸುವ ದೇವರೆಂದೇ ಪ್ರತೀತಿ ಪಡೆದಿರುವ ಮಾಲಂಬಿ ಬೆಟ್ಟದ ಮೇಲೆ ನೆಲೆಯಾಗಿರುವ ಮಳೆ ಮಲ್ಲೇಶ್ವರ ದೇವರಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ.
ಸಮೀಪದ ಗೌಡಳ್ಳಿ ಗ್ರಾಮದಲ್ಲಿರುವ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಸ್.ಬಿ. ಭರತ್ಕುಮಾರ್ ಸೇರಿದಂತೆ ನಿರ್ದೇಶಕರು, ಸಾರ್ವಜನಿಕರುಗಳು ಇಂದು ಮಾಲಂಬಿ ಬೆಟ್ಟದ ಮೇಲಿರುವ ಶ್ರೀ ಮಳೆ ಮಲ್ಲೇಶ್ವರ ದೇವಾಲಯಕ್ಕೆ ತೆರಳಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಎಸ್.ಬಿ. ಭರತ್ಕುಮಾರ್ ಅವರು, ವಾಡಿಕೆಯಂತೆ ಮಾರ್ಚ್ ತಿಂಗಳಿನಲ್ಲಿ ಮಳೆ ಬೀಳಬೇಕಿದೆ. ಆದರೆ ಕಳೆದೆರಡು ವಾರಗಳಿಂದ ಒಂದೆರಡು ಬಾರಿ ಮೋಡ ಮುಸುಕಿದ್ದನ್ನು ಹೊರತುಪಡಿಸಿದರೆ ಮಳೆ ಹನಿಗಳು ಬಿದ್ದಿಲ್ಲ. ಇದೀಗ ಬಿಸಿಲಿನ ಬೇಗುದಿ ಹೆಚ್ಚಿದ್ದು, ಹೊಳೆ-ತೊರೆ, ಸಣ್ಣ ಪುಟ್ಟ ಹಳ್ಳ ಕೊಳ್ಳಗಳಲ್ಲೂ ನೀರಿಲ್ಲದಂತಾಗಿದೆ. ಕೆಲವೆಡೆ ಕುಡಿಯುವ ನೀರಿಗೂ ಹಾಹಾಕಾರ ಕಂಡುಬಂದಿದೆ. ಕೃಷಿ ಕಾರ್ಯಗಳಿಗೂ ನೀರಿಲ್ಲದಂತಾಗಿದ್ದು, ಕೃಷಿಕ ವರ್ಗ ಸಂಕಷ್ಟಕ್ಕೆ ಸಿಲುಕಿದೆ ಎಂದರು. ಇಂತಹ ಸಂದರ್ಭ ಮಳೆ ಕರುಣಿಸುವ ದೇವರೆಂದೇ ಪ್ರಸಿದ್ಧಿಯಾಗಿರುವ ಮಳೆ ಮಲ್ಲೇಶ್ವರ ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಲಾಗಿದ್ದು, ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆಯಿದೆ ಎಂದು ಭರತ್ಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭ ಗೌಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯವಸ್ಥಾಪಕ ಪರಮೇಶ್, ನಿರ್ದೇಶಕರಾದ ಪವಿತ್ರ ಜಯರಾಜ್, ಮಮತ ಅಶೋಕ್, ಪ್ರಮುಖರಾದ ನವೀನ್ ಅಜ್ಜಳ್ಳಿ, ದಿಲೀಪ್, ಗೌಡಳ್ಳಿ ಮತ್ತು ದೊಡ್ಡಮಳ್ತೆ ಗ್ರಾ.ಪಂ. ವ್ಯಾಪ್ತಿಯ ಸಾರ್ವಜನಿಕರು, ಸಹಕಾರ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.