ಕುಶಾಲನಗರ, ಮಾ. 25: ಕಾವೇರಿ ನದಿ ತಟದಲ್ಲಿ ಪಂಪ್‍ಸೆಟ್ ಬಳಸಿ ಅನಧಿಕೃತವಾಗಿ ನೀರೆತ್ತುವದನ್ನು ನಿಷೇಧಿಸುವ ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದ ಬೆನ್ನಲ್ಲೇ ಬತ್ತಿ ಹೋಗಿದ್ದ ಕಾವೇರಿ ನದಿಯಲ್ಲಿ ನೀರಿನ ಹರಿವು ಪ್ರಾರಂಭಗೊಂಡಿದೆ. ಕಳೆದ 1 ವಾರದಿಂದ ಕುಶಾಲನಗರ ವ್ಯಾಪ್ತಿಯಲ್ಲಿ ನದಿಯಲ್ಲಿ ನೀರಿನ ಹರಿವು ಸಂಪೂರ್ಣ ಸ್ಥಗಿತಗೊಂಡು ಆತಂಕದ ಪರಿಸ್ಥಿತಿ ಸೃಷ್ಟಿಯಾಗಿತ್ತು. ಕುಶಾಲನಗರ ಪಟ್ಟಣಕ್ಕೆ ಕುಡಿವ ನೀರಿನ ಸರಬರಾಜು ಕೂಡ ಸ್ಥಗಿತಗೊಂಡು ಟ್ಯಾಂಕರ್‍ಗಳ ಮೂಲಕ ಬಡಾವಣೆಗಳ ನಾಗರೀಕರಿಗೆ ನೀರು ಒದಗಿಸಲಾಗುತ್ತಿತ್ತು. ಇದರೊಂದಿಗೆ ನೀರಿನ ಹರಿವಿಲ್ಲದೆ ಜಲಚರಗಳು ಕೂಡ ನಾಶಗೊಳ್ಳುವದರೊಂದಿಗೆ ನದಿ ನೀರು ಪಾಚಿ ಕಟ್ಟುತ್ತಿದ್ದ ದೃಶ್ಯ ಕಂಡುಬಂದಿತ್ತು.

ಜಿಲ್ಲಾಧಿಕಾರಿಗಳ ಆದೇಶ ಹೊರಬಿದ್ದ ಬೆನ್ನಲ್ಲೇ ಸ್ಥಳೀಯ ಕಂದಾಯ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಕರ್ನಾಟಕ ನೀರು ಸರಬರಾಜು ಮಂಡಳಿ ಅಧಿಕಾರಿಗಳು ನದಿ ತಟದಲ್ಲಿರುವ ಅನಧಿಕೃತ ಪಂಪ್‍ಸೆಟ್‍ಗಳನ್ನು ತೆರವುಗೊಳಿಸುವದರೊಂದಿಗೆ ಪಂಪ್‍ಹೌಸ್ ಬಳಿ ನದಿಗೆ ಅಡ್ಡಲಾಗಿ ಬಂಡ್ ನಿರ್ಮಿಸಲು ಕ್ರಿಯಾಯೋಜನೆ ರೂಪಿಸಲು ಮುಂದಾಗಿದ್ದಾರೆ.