ಗೋಣಿಕೊಪ್ಪಲು,ಮಾ.25: ಕಳತ್ಮಾಡು-ಹೊಸಕೋಟೆ ವ್ಯಾಪ್ತಿಯಲ್ಲಿ ಸುಮಾರು 8 ಕಾಡಾನೆಗಳ ಗುಂಪೆÇಂದು ನಿರಂತರ ಕಂಡುಬರುತ್ತಿದ್ದು, ಇದೀಗ ಅಲ್ಲಿನ ಕೆರೆಯೊಂದರಲ್ಲಿ ಸುಮಾರು 20 ವರ್ಷ ಪ್ರಾಯದ ಮಕಾನಾ ಜಾತಿಯ ಕಾಡಾನೆ ಸತ್ತುಬಿದ್ದಿರುವದು ಗೋಚರವಾಗಿದೆ.ಅಲ್ಲಿನ ಜಮ್ಮಡ ಗೀತಾ ಚಂಗಪ್ಪ ಅವರಿಗೆ ಸೇರಿದ ಕಾಫಿ ತೋಟ ದಲ್ಲಿರುವ ಕೆರೆಯಲ್ಲಿ ಇಂದು ಕಾಡಾನೆ ಸಾವನ್ನಪ್ಪಿರುವದು ಕಂಡುಬಂದಿದೆ. ಕಾಫಿ, ಕಾಳುಮೆಣಸು ಕೊಯ್ಲು ಮುಗಿಸಿ, ಅಲ್ಲಿನ ಕೆರೆಯಿಂದ ಕಾಫಿ ತೋಟಗಳಿಗೆ ನೀರುಹಾಯಿಸಿ ದ್ದರಿಂದಾಗಿ ಕೆರೆಯಲ್ಲಿ ಅಷ್ಟಾಗಿ ನೀರಿರಲಿಲ್ಲ. ಸುಮಾರು 15 ಎಕರೆ ಕಾಫಿತೋಟವಿದ್ದು, ಮಾಲೀಕರ ಕುಟುಂಬ ಅತ್ತೂರು ಗ್ರಾಮದಲ್ಲಿ ವಾಸವಿದೆ. ಈ ಹಿನ್ನೆಲೆ ಕಾಡಾನೆ ಮೂರು ದಿನಗಳ ಹಿಂದೆಯೇ ಸಾವನ್ನಪ್ಪಿರುವ ಸಾಧ್ಯತೆ ಇದ್ದು ಪ್ರಕರಣ ಇಂದು ಬೆಳಕಿಗೆ ಬಂದಿದೆ.ಇಂದು ಬೆಳಿಗ್ಗೆ 2-3 ಕಾಡಾನೆಗಳು ಇದೇ ಕೆರೆಯ ಮಾರ್ಗ ಪಕ್ಕದ ಕಾಫಿತೋಟಕ್ಕೆ ನುಸುಳಿದ್ದು, ಆನೆಗಳು ತೆರಳಿರುವ ಜಾಡನ್ನು ಕಾರ್ಮಿಕರು ಹುಡುಕುತ್ತಾ ಸಾಗಿದ ಸಂದರ್ಭ ಕೆರೆಯಲ್ಲಿ ಮಕಾನಾ ಜಾತಿಯ ಆನೆ ಸತ್ತುಬಿದ್ದಿರುವದು ಬಹಿರಂಗವಾಗಿದೆ. ಕಾಡಾನೆಯು ಹೃದಯಘಾತದಿಂದ ಸಾವನ್ನಪ್ಪಿರುವ ಕುರಿತು ನಾಗರಹೊಳೆ ವನ್ಯಜೀವಿ ವಿಭಾಗದ ಹುಣಸೂರುವಿನ ಪಶುವೈದ್ಯರಾದ ಮುಜೀಬ್ ಅವರು ಶವಪರೀಕ್ಷೆ ನಡೆಸಿ ಖಚಿತಪಡಿಸಿ ದ್ದಾರೆ.ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಆನೆ ಸಾವಿಗೆ ಕಾರಣ-ಆರೋಪ

ಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೋಟೆ, ಬೆಟ್ಟಕೇರಿ, ಕಳತ್ಮಾಡು, ಕೈಕೇರಿ ಗ್ರಾಮದಲ್ಲಿ ನಿರಂತರ ಕಾಡಾನೆ ಉಪಟಳವಿದ್ದು 5 ವರ್ಷದ ಹಿಂದೆಯೇ ಪುಂಡಾನೆ ಗಳನ್ನು ಸೆರೆಹಿಡಿದು ಬೇರೆಡೆಗೆ ಸಾಗಿಸುವ ಮೂಲಕ ಶಾಶ್ವತ ಪರಿಹಾರಕ್ಕಾಗಿ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳನ್ನು ಒತ್ತಾಯಿಸಲಾಗಿತ್ತು.

(ಮೊದಲ ಪುಟದಿಂದ) ಇದೇ ಸಂದರ್ಭ ಸುಮಾರು 5 ಆನೆಗಳನ್ನು ಸೆರೆ ಹಿಡಿಯುವದಾಗಿ ಅಧಿಕಾರಿಗಳೂ ಭರವಸೆ ನೀಡಿದ್ದರು. ಅಂದು ಸೆರೆ ಹಿಡಿದಿದ್ದಲ್ಲಿ ಇಂದು ಆನೆ ಸಾವನ್ನಪ್ಪುವ ಸಾಧ್ಯತೆ ಇರಲಿಲ್ಲ ಎಂದು ಹೊಸೂರು ಗ್ರಾ.ಪಂ.ಅಧ್ಯಕ್ಷ ಕೊಲ್ಲೀರ ಗೋಪಿ ಚಿಣ್ಣಪ್ಪ ‘ಶಕ್ತಿ’ಗೆ ಪ್ರತಿಕ್ರಿಯಿಸಿದ್ದಾರೆ. ಪ್ರಧಾನ ವೈಲ್ಡ್ ಲೈಫ್ ವಾರ್ಡನ್ ವಿನಯ್ ಲೂತ್ರ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗನ್ಮೋಹನ್ ಶರ್ಮಾ ಅವರು ಹೊಸೂರುವಿಗೆ ಆಗಮಿಸಿ, ಗ್ರಾಮಸ್ಥರ ಸಂಪರ್ಕ ಸಭೆಯಲ್ಲಿ ಆನೆ ಸೆರೆ ಕಾರ್ಯಾಚರಣೆಗೆ 5 ವರ್ಷದ ಹಿಂದೆಯೇ ಭರವಸೆ ನೀಡಿದ್ದರು. ಆನೆ ಧಾಳಿಯಿಂದ ಪೂದ್ರಿಮಾಡ ಬೋಪಣ್ಣ ಅವರ ಕಾಲು ಮುರಿತ ಉಂಟಾಗಿತ್ತು, ವಾಹನಗಳನ್ನು ಆನೆಗಳು ಅಡ್ಡಗಟ್ಟುವದು ಸಾಮಾನ್ಯವಾಗಿತ್ತು. ಕಳತ್ಮಾಡುವಿನ ಕತ್ರಿಕೊಲ್ಲಿ ಮಣಿ ಎಂಬವರ ಹಸುವನ್ನು ಕಾಡಾನೆಯೊಂದು ತುಳಿದು ಕೊಂದಿತ್ತು. ಸುಮಾರು ರೂ.30 ಸಾವಿರ ಮೌಲ್ಯದ ಹಸುವಿಗೆ ಇಲಾಖೆ ಕೇವಲ ರೂ.10 ಸಾವಿರ ಪರಿಹಾರ ನೀಡಿತ್ತು. ಉದ್ದೇಶಿತ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು, ತೋಟ ಕಾರ್ಮಿಕರು ಭಯದಿಂದಲೇ ದಿನದೂಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ರ್ಯಾಪಿಡ್ ರೆಸ್ಪಾನ್ಸ್ ತಂಡ ಹಲವು ಬಾರಿ ಪಟಾಕಿ ಸಿಡಿಸಿ, ಗದ್ದಲ ಎಬ್ಬಿಸಿ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಪ್ರಯತ್ನ ಮಾಡಿದರಾದರೂ ಕಾಫಿ ತೋಟದಲ್ಲಿಯೇ ಆನೆಗಳ ಹಿಂಡು ಮತ್ತೆ ಮತ್ತೆ ಪ್ರತ್ಯಕ್ಷವಾಗುವ ಮೂಲಕ ಹಾಗೂ ಕಾಫಿ, ಅಡಿಕೆ, ಬಾಳೆ, ತೆಂಗು, ಭತ್ತದ ಗದ್ದೆಗಳು, ಇತ್ಯಾದಿ ಹಣ್ಣಿನ ಗಿಡಗಳನ್ನು ಧ್ವಂಸ ಮಾಡುವ ಮೂಲಕ ಕೃಷಿಕರಿಗೆ ಲಕ್ಷಾಂತರ ಮೌಲ್ಯದ ಫಸಲು ನಷ್ಟವಾಗತೊಡಗಿತು. ಪರಿಹಾರ ಕಾರ್ಯದ ವಿಳಂಬಗತಿ ಹಾಗೂ ಸೂಕ್ತ ಪರಿಹಾರ ಸಿಗದ ಹಿನ್ನೆಲೆ ಹಲವಷ್ಟು ರೈತರೂ ನಿರಾಶರಾಗಿ ಕೃಷಿ ಚಟುವಟಿಕೆ ಕೈಬಿಡತೊಡಗಿದರು.

ಸ್ಥಳೀಯರಾದ ಕೊಲ್ಲೀರ ಉಮೇಶ ಅವರು, ನಮಗೆ ಪರಿಹಾರ ಬೇಡ ಆನೆಯನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಒತ್ತಾಯಿಸಿದ್ದಾರೆ. ಮಾಜಿ ಜಿ.ಪಂ.ಸದಸ್ಯ ಕೊಲ್ಲೀರ ಧರ್ಮಜ, ಕತ್ರಿಕೊಲ್ಲಿ ದೇವಿ, ಕತ್ರಿಕೊಲ್ಲಿ ಮಣಿ ಮುಂತಾದ ಗ್ರಾಮಸ್ಥರು ಕಾಡಾನೆ ಉಪಟಳವನ್ನು ಶೀಘ್ರ ಶಮನ ಮಾಡುವಂತೆ ಸ್ಥಳಕ್ಕೆ ಆಗಮಿಸಿದ ವೀರಾಜಪೇಟೆ ವಲಯಾರಣ್ಯಾಧಿಕಾರಿ ಗೋಪಾಲ್ ಅವರನ್ನು ಒತ್ತಾಯಿಸಿದರು.

ವೀರಾಜಪೇಟೆ ಉಪ ಅರಣ್ಯಸಂರಕ್ಷಣಾಧಿಕಾರಿ ಮರಿಯಾ ಕ್ರಿಸ್ತರಾಜ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ರೋಶನಿ ಅವರುಗಳು ಮಾಕುಟ್ಟ ರಬ್ಬರ್ ತೋಟ ತೆರವಿಗೆ ಸಂಬಂದಿಸಿದ ವ್ಯಾಜ್ಯ, ಇತ್ಯಾದಿ ವ್ಯಾಜ್ಯ ವಿಚಾರವಾಗಿ ಬೆಂಗಳೂರು ಉಚ್ಛ ನ್ಯಾಯಾಲಯಕ್ಕೆ ತೆರಳಿದ್ದರಿಂದಾಗಿ ತಿತಿಮತಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಪತಿ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೂ.53 ಲಕ್ಷ ಪರಿಹಾರ ವಿತರಣೆ

ವೀರಾಜಪೇಟೆ ಅರಣ್ಯವಲಯ ವ್ಯಾಪ್ತಿಯಲ್ಲಿ ಸುಮಾರು 56 ಹಳ್ಳಿಗಳಲ್ಲಿ ಆನೆ-ಮಾನವ ಸಂಘರ್ಷದ 900 ಪ್ರಕರಣಗಳು ದಾಖಲಾಗಿದ್ದು ಕಳೆದ ಏಪ್ರೀಲ್ ನಿಂದ ಈವರೆಗೆ ಸುಮಾರು ರೂ.53 ಲಕ್ಷ ಪರಿಹಾರವನ್ನು ಸಂತ್ರಸ್ತ ಕೃಷಿಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗಿದೆ. ಇನ್ನೂ ರೂ.7 ಲಕ್ಷ ಪರಿಹಾರ ಮೊತ್ತ ವಿತರಣೆಗೆ ಬಾಕಿ ಇರುವದಾಗಿ ಆರ್‍ಎಫ್‍ಓ ಗೋಪಾಲ್ ಮಾಹಿತಿ ನೀಡಿದ್ದಾರೆ. ವೀರಾಜಪೇಟೆ ಅರಣ್ಯವಲಯ ಹೊಸೂರು ಗ್ರಾ.ಪಂ.ಅಲ್ಲದೆ ಕಕ್ಕಬ್ಬೆ, ಪೆರುಂಬಾಡಿ, ಬಿಟ್ಟಂಗಾಲ, ನಾಂಗಾಲ, ಸಿದ್ದಾಪುರ, ಗುಹ್ಯ,ಹಾಲುಗುಂದ, ಬೇತು, ಕೋಕೇರಿ ಒಳಗೊಂಡಂತೆ 56 ಗ್ರಾಮಗಳಿಗೆ ವಿಸ್ತರಿಸಿದ್ದು, ಅಗತ್ಯ ಅರಣ್ಯ ಸಿಬ್ಬಂದಿ ಕೊರತೆಯೂ ಶೀಘ್ರ ಕಾಡಾನೆ ಉಪಟಳ ನಿವಾರಣೆ ಕಾರ್ಯಾಚರಣೆಗೂ ಅಡ್ಡಿಯಾಗಿದೆ ಎನ್ನಲಾಗಿದೆ. ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಇಲ್ಲಿನ ಪುಂಡಾನೆ ಸೆರೆಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ. ಆದೇಶ ಬಂದೊಡನೆ ಪುಂಡಾನೆ ಸೆರೆ ಹಿಡಿದು ಸ್ಥಳಾಂತರಿಸಲಾಗುವದು ಎಂದು ಗೋಪಾಲ್ ಮಾಹಿತಿ ನೀಡಿದ್ದಾರೆ.

ಸಾವನ್ನಪ್ಪಿದ ಕಾಡಾನೆಯನ್ನು ಇಂದು ಅಪರಾಹ್ನ ಜೆಸಿಬಿ ಮೂಲಕ ಕೆರೆಯಿಂದ ಹೊರತೆಗೆದು, ವನ್ಯಜೀವಿ ವೈದ್ಯರಾದ ಮುಜೀಬ್ ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಜಮ್ಮಡ ಗೀತಾ ಚಂಗಪ್ಪ ಅವರಿಗೆ ಸೇರಿದ ಕಾಫಿ ತೋಟದಲ್ಲಿಯೇ ಹೂಳಲಾಯಿತು.ರ್ಯಾಪಿಡ್ ರೆಸ್ಪಾನ್ಸ್ ತಂಡದ ಉಪ ವಲಯಾರಣ್ಯಾಧಿ ಕಾರಿ ದೇವಯ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

-ವರದಿ: ಟಿ.ಎಲ್.ಶ್ರೀನಿವಾಸ್