ನಾಪೋಕ್ಲು, ಮಾ. 25: ಮೊಬೈಲ್ ಮತ್ತು ಟಿ.ವಿ. ಇಂದು ಸಾಮಾಜಿಕ ಬದುಕನ್ನು ಹಾಳುಗೆಡ ವತ್ತಿದ್ದು, ವಿದ್ಯಾರ್ಥಿಗಳು ಅವುಗಳ ಬಳಕೆಯಿಂದ ದೂರವಿದ್ದು, ಉತ್ತಮ ಶಿಕ್ಷಣದತ್ತ ಗಮನ ಹರಿಸಬೇಕು ಎಂದು ಕೊಂಗಾಂಡ ಮುದ್ದಯ್ಯ ಸುಬ್ಬಯ್ಯ ಟ್ರಸ್ಟ್‍ನ ನಿರ್ದೇಶಕ, ಸ್ಥಳೀಯ ವೈದ್ಯ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.
ಇಲ್ಲಿನ ಎಕ್ಸೆಲ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ನಡೆದ ನವೋದಯ ಪರೀಕ್ಷಾ ತರಬೇತಿ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ವಿದ್ಯಾರ್ಥಿಗಳು ಸಂವಹನಕ್ಕೆ ಮಾತ್ರ ಮೊಬೈಲನ್ನು ಬಳಸಬೇಕು. ಗುರು-ಹಿರಿಯರ ಮಾರ್ಗದರ್ಶನದಲ್ಲಿ ಶಿಕ್ಷಣದಲ್ಲಿ ನಿರಂತರವಾಗಿ ತೊಡಗಿಸಿಕೊಂಡಾಗ ಉತ್ತಮ ಭವಿಷ್ಯ ಲಭಿಸುತ್ತದೆ. ವಿದ್ಯಾರ್ಥಿಗಳು ಪೋಷಕರ ಮತ್ತು ಶಿಕ್ಷಕರ ಒತ್ತಾಯಕ್ಕೆ ಓದದೆ ಇಷ್ಟಪಟ್ಟು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಪರೀಕ್ಷಾ ಅವಧಿಯಲ್ಲಿ ನಿರಂತರ ಅಭ್ಯಾಸ ಮಾಡಿದಲ್ಲಿ ಗುರಿಸಾಧನೆ ಸಾಧ್ಯ ಎಂದರು.
ಕೊಡಗು ಜಿಲ್ಲೆಯಲ್ಲಿ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಗಳಿಸಲು ವಿದ್ಯಾರ್ಥಿಗಳು ನಿರಂತರ ಅಭ್ಯಾಸ ಮಾಡಬೇಕು. ಆಂಗ್ಲ ಭಾಷೆಯಲ್ಲಿ ಪರಿಣತಿಯನ್ನು ಹೊಂದಬೇಕು ಎಂದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಕ್ಕಳನ್ನು ಸಜ್ಜುಗೊಳಿಸುವಲ್ಲಿ ಪೋಷಕರ ಪಾತ್ರ ಮುಖ್ಯವಾದುದು ಎಂದು ಅಭಿಪ್ರಾಯಪಟ್ಟ ಅವರು, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಮಾತ್ರವಲ್ಲ ಪೋಷಕರು ಮಾಹಿತಿ ತಂತ್ರಜ್ಞಾನದ ಜ್ಞಾನವನ್ನು ಹೊಂದಬೇಕಾಗಿದೆ.
ಗ್ರಾಮೀಣ ಪ್ರದೇಶದ ಜನರಿಗೆ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನದ ಸೌಲಭ್ಯಗಳು ಇನ್ನೂ ಕೈಗೆಟುಕ ದಿರುವದರಿಂದ ತೊಂದರೆಯಾಗುತ್ತಿದೆ ಎಂದರು. ವಿದ್ಯಾರ್ಥಿಗಳು ದಿನನಿತ್ಯ ಪತ್ರಿಕೆಯನ್ನು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಮಾನ್ಯ ಜ್ಞಾನವನ್ನು ವೃದ್ಧಿಸಿಕೊಳ್ಳಬೇಕಾಗಿದೆ. ಸರ್ಕಾರ ಕಡ್ಡಾಯ ಶಿಕ್ಷಣ ಕಾಯಿದೆಯನ್ನು ಜಾರಿಗೆ ತಂದಿದ್ದು ಬಡ ವಿದ್ಯಾರ್ಥಿಗಳು ಖಾಸಗಿ ಶಾಲೆಗಳಲ್ಲಿ ಶುಲ್ಕ ರಹಿತವಾಗಿ ಪ್ರವೇಶ ಪಡೆದುಕೊಳ್ಳಬಹುದು ಎಂದರು.
ಈ ಸಂದರ್ಭ ಪೂರ್ವಭಾವಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕೊಂಗಾಂಡ ಮುದ್ದಯ್ಯ ಟ್ರಸ್ಟ್ ವತಿಯಿಂದ ಪುರಸ್ಕರಿಸಲಾಯಿತು. ಪೋಷಕರ ಪರವಾಗಿ ಶಿಕ್ಷಕಿ ಸುಜಾತ ಮಾತನಾಡಿದರು. ವಿದ್ಯಾರ್ಥಿಗಳಿಗಾಗಿ ನಡೆಸಿದ ಪೂರ್ವ ಸಿದ್ಧತಾ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನಗಳನ್ನು ನೀಡಿ ಪುರಸ್ಕರಿಸಲಾಯಿತು. ಎಕ್ಸೆಲ್ ಸ್ಕೂಲ್ ಆಫ್ ಎಜುಕೇಶನ್‍ನ ಅಧ್ಯಕ್ಷ ಕುಟ್ಟಂಜೆಟ್ಟೀರ ಮಾದಪ್ಪ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿ.ಎಸ್. ಸುರೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಿಕ್ಷಕ ಶರತ್ ಸ್ವಾಗತಿಸಿ, ವಂದಿಸಿದರು.