ಮಡಿಕೇರಿ, ಮಾ. 25: ಕೊಡಗು ಜಿಲ್ಲಾ ಅಬಕಾರಿ ಇಲಾಖೆಯ ವತಿಯಿಂದ ನಿನ್ನೆ ದಿನ ವಿವಿಧ ಕಡೆ ದಾಳಿ ನಡೆಸಿದ್ದು, ಸೋಮವಾರಪೇಟೆ ತಾಲೂಕಿನ ಕ್ಯಾತೆ ಗ್ರಾಮದ ಮೋಹನ್ ಅವರಿಗೆ ಸೇರಿದ ಜಮೀನಿನಲ್ಲಿ ಅಕ್ರಮವಾಗಿ ಕಳ್ಳಭಟ್ಟಿಯನ್ನು ತಯಾರಿಸಿ ಅಲ್ಲಿನ ಸ್ಥಳೀಯರಿಗೆ ಮಾರಾಟ ಮಾಡುತ್ತಿರುವದನ್ನು ಪತ್ತೆಹಚ್ಚಿ 2,500 ಲೀಟರ್ ಕಳ್ಳಭಟ್ಟಿ, ಒಂದು ದ್ವಿಚಕ್ರ ವಾಹನ ಹಾಗೂ ಇನ್ನಿತರ ಸಾಮಗ್ರಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಒಟ್ಟು 4,400 ಲೀಟರ್ ಮದ್ಯ, 2,500 ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡು, 9 ಆರೋಪಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ. ವಶಪಡಿಸಿಕೊಂಡ ಮದ್ಯ ಮತ್ತು ವಾಹನದ ಅಂದಾಜು ಮೊತ್ತ ರೂ. 23,585 ಗಳಾಗಿದೆ.
ಸಂಪಾಜೆ ಗ್ರಾಮದಲ್ಲಿ ವಾಸವಾಗಿರುವ ಚಂದ್ರಶೇಖರ್ ಅವರ ಮನೆಯ ಮೇಲೆ ದಾಳಿ ನಡೆಸಿ 51,840 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಲಾಯಿತು. ಆಲೂರು-ಸಿದ್ದಾಪುರ ಗ್ರಾಮದ ನಿವಾಸಿ ರಾಮಕೃಷ್ಣ ಎಂಬಾತ ಮನೆಯಲ್ಲಿ ಅಕ್ರಮ ಮದ್ಯವನ್ನು ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 7,740 ಲೀಟರ್ ಮದ್ಯವನ್ನು ವಶಪಡಿಸಿಕೊಂಡು ಆರೋಪಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಒಟ್ಟು 62,990 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದ್ದು, ವಶಪಡಿಸಿಕೊಂಡ ಮದ್ಯದ ಮೊತ್ತ ರೂ. 21,194.