ಮಡಿಕೇರಿ, ಮಾ. 24: ದಿನದಿಂದ ದಿನಕ್ಕೆ ಸರಕಾರಿ ಶಾಲೆಗಳು ಮುಚ್ಚುತ್ತಿದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಸಾಮಾನ್ಯ ವರ್ಗದವರೂ ಖಾಸಗಿ ಶಾಲೆಗಳ ವ್ಯಾಮೋಹಕ್ಕೆ ಸಿಲುಕಿದ್ದು. ಇದನ್ನು ನಿವಾರಿಸುವ ಸಲುವಾಗಿ ಸರಕಾರಿ ಶಾಲೆಗಳು ವಿಭಿನ್ನ ಕೆಲಸಕ್ಕೆ ಕೈಹಾಕಿ ಸೈ ಎನ್ನಿಸಿಕೊಳ್ಳುವಂತೆ ಬೋಯಿಕೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್.ಡಿ.ಎಂ.ಸಿ. ಸಹಕಾರದೊಂದಿಗೆ ಎಲ್.ಕೆ.ಜಿ. ಪ್ರಾರಂಭಿಸಲು ನಿರ್ಧರಿಸಲಾಗಿದೆ.

ಸರಕಾರಿ ಶಾಲೆಗಳಲ್ಲಿ 1ನೇ ತರಗತಿಗೆ ಮಕ್ಕಳು ದಾಖಲಾಗುವದು ಕಡಿಮೆಯಾಗುತ್ತಿರುವ ಹಿನ್ನೆಲೆ ಎಲ್.ಕೆ.ಜಿ.ಯನ್ನು ಪ್ರಾರಂಭಿಸಿದರೆ ಹಂತ ಹಂತವಾಗಿ ಮಗುವು 8ನೇ ತರಗತಿಯವರೆಗೆ ಶಾಲೆಯಲ್ಲಿ ಉಳಿ ಯುತ್ತದೆ ಎಂಬದು ಶಿಕ್ಷಕ ವರ್ಗದವರು ಮತ್ತು ಎಸ್.ಡಿ.ಎಂ.ಸಿ. ಯವರ ಅಭಿಪ್ರಾಯವಾಗಿದೆ. ಶಾಲೆಯಲ್ಲಿ ಪೋಷಕರನ್ನು ಕರೆಸಿ ಎಲ್.ಕೆ.ಜಿ.ಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಸಾಂಕೇತಿಕವಾಗಿ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಎಲ್.ಕೆ.ಜಿ.ಗೆ 5 ಮಕ್ಕಳು ಮತ್ತು 1ನೇ ತರಗತಿಗೆ 2 ಮಕ್ಕಳು ದಾಖಲಾದರು. ಮುಂದಿನ ಶೈಕ್ಷಣಿಕ ವರ್ಷದಲ್ಲಿ ಈ ಶಾಲೆಗೆ ಕಂಪ್ಯೂಟರ್ ಸಹ ಮಂಜೂರಾಗಿದ್ದು, ಮಕ್ಕಳಿಗೆ ಕಂಪ್ಯೂಟರ್ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರು ಶ್ರಮ ವಹಿಸಿದ್ದು ಈಗಾಗಲೇ ದಾನಿಗಳ ನೆರವಿನಿಂದ ಶಾಲಾ ಅವರಣದಲ್ಲಿ ಬೋರ್‍ವೆಲ್ ಕೊರೆಯಲಾಗಿದ್ದು, ಶಾಲಾ ಅಕ್ಷರ ದಾಸೋಹ ಕೆಲಸಕ್ಕೆ ಇಲ್ಲಿಯೇ ಶುದ್ಧವಾದ ನೀರು ದೊರೆಯುತ್ತಿದೆ ಎಂದು ಮುಖ್ಯ ಶಿಕ್ಷಕರು ತಿಳಿಸಿದರು.

ಈ ಸಂದರ್ಭ ಶಾಲಾ ಮುಖ್ಯ ಶಿಕ್ಷಕ ಹೆಚ್.ಅರ್. ರಾಜು, ಕಡಗದಾಳು ಕ್ಲಷ್ಟರ್‍ನ ಸೌಮ್ಯ ಶೆಟ್ಟಿ, ಜಿಲ್ಲಾ ಸಮನ್ವಯ ಶಿಕ್ಷಣ ಸಂಪನ್ಮೂಲ ಶಿಕ್ಷಕ ಹೆಚ್.ಎಂ. ವೆಂಕಟೇಶ. ದೈಹಿಕ ಶಿಕ್ಷಣ ಶಿಕ್ಷಕ ಪೂರ್ಣೇಶ, ಸಹ ಶಿಕ್ಷಕರಾದ ಶಿವಕುಮಾರ್, ಐರಿನ್ ಉಷಾ ಪಿ.ಬಿ., ಪಾರ್ವತಿ, ಚೈತ್ರಾ. ಸುಲೋಚನಾ ಪೋಷಕರು ಮತ್ತು ಶಾಲಾ ಮಕ್ಕಳು ಹಾಜರಿದ್ದರು.