ಗೋಣಿಕೊಪ್ಪ, ಮಾ. 24: ಭಾರತೀಯ ಬಿಲಿಯಡ್ಸ್ ಹಾಗೂ ಸ್ನೂಕರ್ ಸಂಸ್ಥೆ (ಬಿಎಸ್‍ಎಫ್‍ಐ)ನ 2019 ರಿಂದ 2023ರ ವರೆಗಿನ ನೂತನ ಅಧ್ಯಕ್ಷರಾಗಿ ಉದ್ಯಮಿ ಮುರುವಂಡ ಸಿ. ವಾಸು ಉತ್ತಪ್ಪ ಆಯ್ಕೆಯಾಗಿದ್ದಾರೆ.

ಭಾರತ ಸರಕಾರದ ಯುವಜನ ಹಾಗೂ ಕ್ರೀಡಾ ಇಲಾಖೆಯ ಮಾನ್ಯತೆಯನ್ನು ಪಡೆದುಕೊಂಡಿರುವ ಈ ಸಂಸ್ಥೆ 1926ರಲ್ಲಿ ಪ್ರಾರಂಭವಾಗಿದ್ದು, 93 ವರ್ಷಗಳ ಇತಿಹಾಸವನ್ನು ಹೊಂದಿದೆ. ಇದೇ ಪ್ರಥಮ ಬಾರಿಗೆ ಕರ್ನಾಟಕದಿಂದ ವಾಸು ಉತ್ತಪ್ಪ ಭಾರತೀಯ ಬಿಲಿಯಡ್ಸ್‍ನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಕೊಳತೋಡು ಗ್ರಾಮದ ಮುರುವಂಡ ಚೆಂಗಪ್ಪ ಮತ್ತು ಪಾಲಿ ದಂಪತಿಯ ಪುತ್ರರಾಗಿರುವ ಉತ್ತಪ್ಪ ಅವರು ಬೆಂಗಳೂರಿನಲ್ಲಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ 40 ವರ್ಷಗಳಿಂದ ಕರ್ನಾಟಕ ರಾಜ್ಯ ಬಿಲಿಯಡ್ಸ್ ಹಾಗೂ ಸ್ನೂಕರ್ ಸಂಸ್ಥೆಯಲ್ಲಿ ಸದಸ್ಯರಾಗಿರುವ ಇವರು ಬಿಎಸ್‍ಎಪ್‍ಐನಲ್ಲಿ ಕಳೆದ 4 ವರ್ಷದಿಂದ ಖಜಾಂಚಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಇದೇ ಪ್ರಥಮ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.