ಸೋಮವಾರಪೇಟೆ, ಮಾ. 24: ತಾಲೂಕಿನ ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಮೂಲ ನಿವಾಸಿ ಗಳಾಗಿರುವ ಬೆಟ್ಟದಳ್ಳಿ ಗ್ರಾಮಸ್ಥರಿಗೆ ಕುಡಿಯುವ ನೀರಿಗೆ ಹಾಹಾಕಾರ ಕಂಡುಬಂದಿದೆ. ‘ಗ್ರಾಮ ಪಂಚಾಯಿತಿ ಅವೈಜ್ಞಾನಿಕ ಕ್ರಮಗಳಿಂದ ನಮಗೆ ನೀರೂ ಸಹ ಇಲ್ಲವಾಗಿದೆ. ನಮಗಳ ಸಮಸ್ಯೆಗೆ ಸ್ಪಂದಿಸದ ಗ್ರಾಮ ಪಂಚಾಯಿತಿ ಇದ್ದರೆಷ್ಟು, ಬಿಟ್ಟರೆಷ್ಟು’ ಎಂದು ಆಕ್ರೋಶ ವ್ಯಕ್ತಪಡಿಸಿರುವ ಸ್ಥಳೀಯರು, ‘ಪಂಚಾಯಿತಿಯನ್ನು ಸೂಪರ್ ಸೀಡ್ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.

ಇದರೊಂದಿಗೆ ಮುಂದಿನ 15 ದಿನಗಳ ಒಳಗೆ ಕುಡಿಯುವ ನೀರಿನ ಸಮಸ್ಯೆ ಪರಿಹರಿಸದಿದ್ದಲ್ಲಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುವದರೊಂದಿಗೆ, ಪ್ರಸಿದ್ಧ ಪ್ರವಾಸಿ ತಾಣ ಮಲ್ಲಳ್ಳಿ ಜಲಪಾತಕ್ಕೆ ತೆರಳುವ ಪ್ರಮುಖ ರಸ್ತೆಯನ್ನು ತಡೆದು ಉಗ್ರ ಹೋರಾಟ ಹಮ್ಮಿಕೊಳ್ಳುವದಾಗಿ ಎಚ್ಚರಿಕೆ ನೀಡಿದ್ದಾರೆ.

ಕಮಿಷನ್ ದಂಧೆ: ತಾಲೂಕಿನ ಬೆಟ್ಟದಳ್ಳಿ ಗ್ರಾಮ ಪಂಚಾಯಿಯಲ್ಲಿ ಕಳೆದ 1 ತಿಂಗಳಿನಿಂದಲೇ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಅವೈಜ್ಞಾನಿಕ ಕ್ರಮಗಳ ಮೂಲಕ ಲಕ್ಷಾಂತರ ರೂಪಾಯಿಯನ್ನು ಕುಡಿಯುವ ನೀರಿಗೆ ವ್ಯಯಿಸಿದ್ದರೂ ಟ್ಯಾಪ್‍ಗಳಲ್ಲಿ ಮಾತ್ರ ಒಂದು ಹನಿ ನೀರೂ ಬರುತ್ತಿಲ್ಲ. ಕಮಿಷನ್ ದಂಧೆಯಲ್ಲಿ ನಿರತವಾಗಿರುವ ಪಂಚಾಯಿತಿ ಪಿಡಿಓ ಮತ್ತು ಕೆಲ ಸದಸ್ಯರುಗಳಿಂದಾಗಿ ಜನತೆ ನೀರಿಗೂ ತತ್ವಾರ ಅನುಭವಿಸುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೂಪರ್‍ಸೀಡ್ ಮಾಡಿ: ‘ಕಳೆದ ಡಿಸೆಂಬರ್‍ನಲ್ಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ಕಡೆಗಳಲ್ಲಿ ನೂತನ ಬೋರ್‍ವೆಲ್ ಕೊರೆಸಲು ಸ್ಥಳ ಗುರುತಿಸಿದ್ದರೂ ಇಂದಿಗೂ ಬೋರ್‍ವೆಲ್ ಕೊರೆಯುವ ಕೆಲಸ ಆಗಿಲ್ಲ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ, ಜನಪ್ರತಿನಿಧಿಗಳು ಇದ್ದೂ ಇಲ್ಲದಂತಾಗಿದೆ. ಇಂತಹ ಪಂಚಾಯಿತಿ ಏಕೆ ಬೇಕು? ತಕ್ಷಣ ಸೂಪರ್ ಸೀಡ್ ಮಾಡಿ ಜಿಲ್ಲಾಧಿಕಾರಿಗಳೇ ಅಧಿಕಾರ ವಹಿಸಿಕೊಂಡು ನಮಗೆ ಕುಡಿಯುವ ನೀರು ಕೊಡಿಸಲಿ’ ಎಂಬದು ಗ್ರಾಮದ ಬಹುಪಾಲು ಜನರ ಕೋರಿಕೆ.

ಚುನಾವಣೆ ಬಹಿಷ್ಕಾರ: ‘ಮುಂದಿನ 15 ದಿನಗಳವರೆಗೆ ಸಮಯ ನೀಡುತ್ತೇವೆ. ನೀರಿನ ಸಮಸ್ಯೆ ಬಗೆಹರಿಸದಿದ್ದರೆ ಲೋಕಸಭಾ ಚುನಾವಣೆ ಬಹಿಷ್ಕರಿಸುವದರೊಂದಿಗೆ, ಮುಖ್ಯರಸ್ತೆಯನ್ನು ತಡೆದು ಪ್ರತಿಭಟಿಸುತ್ತೇವೆ. ರೆಸಾರ್ಟ್, ಹೋಂ ಸ್ಟೇಗಳಿಂದ ಹಣ ಪಡೆದು ಒಂದು ವಾರದಲ್ಲೇ ನೀರಿನ ಸಂಪರ್ಕ ನೀಡುತ್ತಾರೆ, ನಾವುಗಳು ಕೇಳಿದರೆ ಯಾವದೇ ಸ್ಪಂದನೆಯಿಲ್ಲ. ಕಮಿಷನ್ ದಂಧೆಯಲ್ಲೇ ಕಾಲ ಕಳೆಯುತ್ತಿದ್ದಾರೆ’ ಎಂದು ಗ್ರಾಮಸ್ಥರಾದ ಸಂಪತ್, ಜಗದೀಶ್, ಶಿವಕುಮಾರ್, ಓಂಕಾರಪ್ಪ ಸೇರಿದಂತೆ ಇತರರು ಆರೋಪಿಸಿದ್ದಾರೆ.

ಜಲಮೂಲಗಳೇ ನಾಶ: ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಇರುವ ಜಲಮೂಲಗಳು ಬತ್ತಿದ್ದರೂ ಸಹ ಅವುಗಳಿಗೆ ಮೋಟಾರ್ ಇಳಿಸಿ ಜನರ ಕಣ್ಣೊರೆಸುವ ತಂತ್ರ ಮಾಡಲಾಗುತ್ತಿದೆ. ಬಾವಿಯ ನೀರು ಪಾತಾಳ ಸೇರಿದ್ದು, 10 ಬಿಂದಿಗೆ ನೀರು ಹೊರ ತೆಗೆದರೆ ಬಾವಿಯೇ ಖಾಲಿಯಾಗುತ್ತದೆ. ಇನ್ನು ಗದ್ದೆ ಬದಿಯಲ್ಲಿ 3ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ರಿಂಗ್ ಬಾವಿ ನಿರ್ಮಿಸಿ, ಅದಕ್ಕೆಂದೇ ವಿದ್ಯುತ್ ಕಂಬ, ಟ್ರಾನ್ಸ್‍ಫಾರ್ಮರ್ ಅಳವಡಿಸಿದ್ದರೂ ಸಹ, ಹನಿ ನೀರೂ ಸಹ ಕುಡಿಯಲು ಯೋಗ್ಯವಾಗಿಲ್ಲ. ಬಾವಿಯ ನೀರು ಹಳದಿ ಬಣ್ಣಕ್ಕೆ ತಿರುಗಿದ್ದು, ಕುಡಿದರೆ ಆರೋಗ್ಯಕ್ಕೆ ಖಾತ್ರಿ ಇಲ್ಲ ಎಂಬಂತಾಗಿದೆ.

ಈಡೇರದ ಬೇಡಿಕೆ: ಗ್ರಾಮದ ಬೀರೇಕೆರೆಯಲ್ಲಿ ಸಾಕಷ್ಟು ನೀರಿದೆ. ಇಲ್ಲಿ ನೂತನವಾಗಿ ಟ್ಯಾಂಕ್ ನಿರ್ಮಿಸಿ ಪ್ರತ್ಯೇಕ ಪೈಪ್‍ಲೈನ್ ಮಾಡಬೇಕಿದೆ. ಸ.ಹಿ.ಪ್ರಾ.ಶಾಲೆಯ ಬಳಿಯಲ್ಲಿರುವ ನೀರಿನ ಟ್ಯಾಂಕ್‍ನ್ನು ದುರಸ್ತಿ ಪಡಿಸಿ, ನೀರು ಶೇಖರಿಸಿದರೆ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ. ಬಾವಿ ದುರಸ್ತಿ ಪಡಿಸಿದರೆ ಪರಿಶಿಷ್ಟ ಜಾತಿ ಕಾಲೋನಿಯ ನೀರಿನ ಸಮಸ್ಯೆ ಬಗೆಹರಿಯಲಿದೆ. ಆದರೆ ಇಂತಹ ಕ್ರಮಗಳನ್ನು ಕೈಗೊಳ್ಳಲು ಪಂಚಾಯಿತಿ ಆಡಳಿತ ಅಸಡ್ಡೆ ತೋರುತ್ತಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

2 ದಿನಕ್ಕೆ 10 ಬಿಂದಿಗೆ ನೀರು: ಸಿದ್ಧಾರ್ಥ ನಗರದ ನಿವಾಸಿಗಳಿಗೆ ಇದೀಗ 2 ದಿನಗಳಿಗೊಮ್ಮೆ 10 ಬಿಂದಿಗೆ ನೀರು ಒದಗಿಸಲಾಗುತ್ತಿದೆ. ಹೊರಭಾಗದಿಂದ 1 ಬ್ಯಾರಲ್‍ಗೆ 50 ರೂ.ನಂತೆ ನೀರು ಖರೀದಿಸಿ ಪ್ರತಿ ಮನೆಗೂ 10 ಬಿಂದಿಗೆ ನೀರು ಕೊಡುತ್ತಿದ್ದಾರೆ. ಈ ನೀರಲ್ಲಿ ಏನು ಮಾಡೋಕೆ ಸಾಧ್ಯ. ಅಡುಗೆ, ಸ್ನಾನ, ಬಟ್ಟೆ ಶುಚಿ, ಮಕ್ಕಳಿಗೆ ಅಗತ್ಯಕ್ಕೆ ತಕ್ಕಂತೆ ನೀರು ಕೊಡಲೂ ಸಹ ಆಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಶಿವಮ್ಮ ಸೇರಿದಂತೆ ಇತರರು ಅಳಲು ತೋಡಿಕೊಂಡಿದ್ದಾರೆ.

ಒಟ್ಟಾರೆ ಬೆಟ್ಟಗುಡ್ಡಗಳ ನಡುವೆ ನೆಲೆಯಾಗಿರುವ ಬೆಟ್ಟದಳ್ಳಿ ಗ್ರಾಮಸ್ಥರು ಇದೀಗ ಕುಡಿಯುವ ನೀರಿಗೂ ಪರದಾಟ ಅನುಭವಿಸುತ್ತಿದ್ದಾರೆ.

ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಿದ್ದಾರೆ. ತಕ್ಷಣ ಈ ಭಾಗದ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳೇ ಗಮನ ಹರಿಸಬೇಕೆಂದು ಸ್ಥಳೀಯರಾದ ಪುಪ್ಪಯ್ಯ, ಶಂಕರ, ಗಿರೀಶ್, ಗಣಪತಿ, ಈರಪ್ಪ, ಕೆ.ಎಂ. ಗಿರೀಶ್, ಹೆಚ್.ಎಂ. ಲೋಕೇಶ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.

- ವಿಜಯ್ ಹಾನಗಲ್