ಕುಶಾಲನಗರ, ಮಾ. 24: ಕಾವೇರಿ ನದಿ ಸಂರಕ್ಷಣೆಯ ಬಗ್ಗೆ ಯೋಜನೆಗಳನ್ನು ರೂಪಿಸುವ ನಿಟ್ಟಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಬೇಕೆಂದು ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಅಮೃತ್‍ರಾಜ್ ಆಗ್ರಹಿಸಿದ್ದಾರೆ. ಕುಶಾಲನಗರದ ಮಾತೆ ಕಾವೇರಿ ಮಹಾ ಆರತಿ ಬಳಗದ ಆಶ್ರಯದಲ್ಲಿ ಅಯ್ಯಪ್ಪಸ್ವಾಮಿ ದೇವಾಲಯ ಬಳಿ ನಡೆದ 92ನೇ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ನದಿ ಮತ್ತು ನದಿ ತಟಗಳ ವಾಸ್ತವಾಂಶ ಅರಿಯಲು ಜಿಲ್ಲಾಡಳಿತ ವಿಶೇಷವಾಗಿ ಗಮನಹರಿಸಬೇಕಾಗಿದೆ. ನದಿ ನೀರಿನ ಸಂರಕ್ಷಣೆಗೆ ಪ್ರತಿ ಗ್ರಾಮಪಂಚಾಯ್ತಿಯಲ್ಲಿ ಅಧಿಕಾರಿ ನೇಮಕ ಮಾಡುವದರೊಂದಿಗೆ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಗಂಗಾ ಯೋಜನೆಯಂತೆ ಕಾವೇರಿಗೆ ವಿಶೇಷ ಯೋಜನೆಗಳನ್ನು ರೂಪಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರ ಚಿಂತನೆ ಹರಿಸಬೇಕೆಂದು ಅಮೃತ್‍ರಾಜ್ ತಿಳಿಸಿದರು.
ಮಹಾ ಆರತಿ ಬಳಗದ ಪ್ರಮುಖ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಜೀವನದಿ ಕಾವೇರಿ ಬೇಸಿಗೆ ಅವಧಿಯಲ್ಲಿ ಬತ್ತಿ ಹೋಗುತ್ತಿದ್ದು ಆತಂಕದ ವಿಷಯವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಿ ಜಲಮೂಲಗಳ ಅಳಿವಿಗೆ ವಾಸ್ತವಾಂಶ ತಿಳಿಯಲು ಕಾರ್ಯಯೋಜನೆ ರೂಪಿಸಬೇಕು ಎಂದರು.
ಹೋಳಿ ಹುಣ್ಣಿಮೆ ಅಂಗವಾಗಿ ನಡೆದ ಆರತಿ ಕಾರ್ಯಕ್ರಮದಲ್ಲಿ ಅರ್ಚಕರಾದ ಕೃಷ್ಣಮೂರ್ತಿ ಭಟ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ಸಮಿತಿ ಪ್ರಮುಖರಾದ ಡಿ.ಆರ್. ಸೋಮಶೇಖರ್, ಕೆ.ಆರ್. ಶಿವಾನಂದನ್, ಮಂಡೇಪಂಡ ಬೋಸ್ ಮೊಣ್ಣಪ್ಪ, ಬಿ.ಜೆ. ಅಣ್ಣಯ್ಯ, ವೈಶಾಖ್, ವನಿತಾ ಚಂದ್ರಮೋಹನ್, ಪ್ರದೀಪ್ ನಾಗರಾಜ್ ಮತ್ತಿತರರು ಇದ್ದರು.
ಕುಶಾಲನಗರ ಪಟ್ಟಣದ ಸಾಯಿ ಬಡಾವಣೆಯ ಶ್ರೀ ಸಾಯಿ ದೇವಾಲಯದಲ್ಲಿ ಹುಣ್ಣಿಮೆ ಅಂಗವಾಗಿ ವಿಶೇಷ ಆರತಿ ಕಾರ್ಯ ಕ್ರಮಗಳು ಜರುಗಿದವು.
ಬೆಳಗಿನಿಂದ ಸಂಜೆ ತನಕ ವಿವಿಧ ರೀತಿಯ ಆರತಿ ಹಾಗೂ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು. ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ನಂತರ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಯಿತು. ಸಾಯಿ ದೇವಸ್ಥಾನ ಟ್ರಸ್ಟ್‍ನ ಪ್ರಮುಖರಾದ ಧರೇಶ್ ಬಾಬು, ಒಬುಳ ರೆಡ್ಡಿ ಮತ್ತಿತರರು ಇದ್ದರು.
ಕುಶಾಲನಗರ ಕಾವೇರಿ ಸೇತುವೆ ಬಳಿ ಕಾವೇರಿ ಪ್ರತಿಮೆಗೆ ಹುಣ್ಣಿಮೆ ಅಂಗವಾಗಿ ಅಭಿಷೇಕ, ಆರತಿ ಕಾರ್ಯಕ್ರಮಗಳು ನಡೆದವು. ಬಾರವಿ ಕನ್ನಡ ಸಂಘದ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಜರುಗಿತು. ಸಂಘದ ಬಬೀಂದ್ರ ಪ್ರಸಾದ್, ರವೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್ ಮತ್ತಿತರರು ಇದ್ದರು.