ವೀರಾಜಪೇಟೆ, ಮಾ. 24: ಮೂಲಭೂತ ಸಮಸ್ಯೆಗಳನ್ನು ಈಡೇರಿಸುವಂತೆ ಚೇಲಾವರ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವದಾಗಿ ಪತ್ರಿಕೆಗಳು ವರದಿ ಮಾಡಿದ್ದವು. ಪತ್ರಿಕೆಯ ವರದಿಯನ್ನು ಆಧರಿಸಿ ಚೇಲಾವರ ಗ್ರಾಮಕ್ಕೆ ಮಡಿಕೇರಿ ತಹಶೀಲ್ದಾರ್ ನಟೇಶ್ ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು.
ಮಡಿಕೇರಿ ತಾಲೂಕಿನ ನಾಪೋಕ್ಲು ಹೋಬಳಿಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪತ್ತೇಟಿ ಚೇಲಾವರ ಗ್ರಾಮದಲ್ಲಿ ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡಲು ವಿಫ¯ವಾದ ಸರ್ಕಾರದ ವಿರುದ್ಧ ಹಾಗೂ ಸ್ಥಳೀಯ ಆಡಳಿತ ಮತ್ತು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಧಿಕ್ಕರಿಸಿ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡುವಂತೆ ನಿರ್ಧಾರ ಮಾಡಿದ್ದರು.
ಗ್ರಾಮಸ್ಥರ ಪರವಾಗಿ ಮಾತನಾಡಿದ ಪಟ್ಟೇಚರುವಂಡ ಸುಬ್ಬಯ್ಯ, ರಸ್ತೆ ದುರಸ್ತಿ ಕಾಣದೇ 20 ವರ್ಷಗಳು ಸಂದಿವೆ. ವಿದ್ಯುತ್ ಇಲಾಖೆಯಿಂದ ಸರಬರಾಜುವಾಗುವ ವಿದ್ಯುತ್ ಅಲ್ಪ ಪ್ರಮಾಣದಲ್ಲಿದ್ದು, ಸಂಜೆಯ ಓಲ್ಟೇಜ್ನಿಂದ ಗೃಹಬಳಕೆಯ ಕೆಲಸಗಳು ಅಪೂರ್ಣಗೊಳ್ಳುತ್ತಿದೆ. ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ ಎಂದು ತಹಶೀಲ್ದಾರ್ ಮುಂದೆ ವಿವರಿಸಿದರು.
ಗ್ರಾಮಸ್ಥ ತಿಲಕ್ ಮಾತನಾಡಿ, ಸಮಸ್ಯೆಗಳಿಗೆ ಪೂರಕವಾದ ಸ್ವಂದನ ಮಾಡದ ಕಾರಣ ಲೊಕಸಭಾ ಚುನಾವಣೆ ಬಹಿಷ್ಕಾರ ಮಾಡುತ್ತೇವೆ ಎಂದು ಹೇಳಿದರು.
ಗ್ರಾಮಸ್ಥರ ಅವಹಾಲುಗಳನ್ನು ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ್, ಮತದಾನದ ಹಕ್ಕು ಅವಿಭಾಜ್ಯ ಅಂಗವಾಗಿದ್ದು, ಚುನಾವಣೆ ಬಹಿಷ್ಕಾರದಿಂದ ಸರ್ಕಾರದ ಸೌಲಭ್ಯಗಳಿಂದ ವಂಚಿತವಾಗಬಹುದು. ಸಮಸ್ಯೆಗಳು ಎಲ್ಲಾ ಗ್ರಾಮದಲ್ಲಿವೆ ಆದರೆ ಸಮಸ್ಯೆಗಳ ಪರಿಹಾರಕ್ಕೆ ಇದು ಸೂಕ್ತ ಸಮಯವಲ್ಲ. ಚುನಾವಣೆಯ ನೀತಿ ಸಂಹಿತೆ ಜಾರಿಗೆಯಾಗಿರುವದರಿಂದ ಇಲಾಖೆಯ ಮಟ್ಟದಲ್ಲಿ ಸಭೆ ಕರೆಯುವದು ಸಾಧ್ಯವಾಗುವದಿಲ್ಲ. ಚುನಾವಣೆ ಕಳೆದ ನಂತರ ಇಲಾಖೆಯ ಅಧಿಕಾರಿಗಳ ಸಭೆ ಕರೆದು ಸಮಸ್ಯೆಗಳ ಸಮಗ್ರ ವರದಿಯನ್ನು ಸಿದ್ಧಪಡಿಸಿ ಇತ್ಯರ್ಥ ಮಾಡಬಹುದಾಗಿದೆ ಎಂದು ಹೇಳಿದರು.
ತಹಶೀಲ್ದಾರ್ ಭೇಟಿಯ ಸಂದರ್ಭ ಚೇಲಾವರ ಯುವಕ ಸಂಘದ ಅಧ್ಯಕ್ಷ ಜೈನೀರ ತನು, ನಾಪೋಕ್ಲು ಹೋಬಳಿಯ ಕಂದಾಯ ಪರಿವೀಕ್ಷಕ ಜೆ.ಡಿ. ರಾಮಯ್ಯ, ಗ್ರಾಮ ಲೆಕ್ಕಾಧಿಕಾರಿ ಸ್ವಾತಿ, ಗ್ರಾಮ ಸಹಾಯಕ ಕೆ.ಎಂ. ರಾಜ, ನರಿಯಂದಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬೆಳ್ಳಿಯಂಡ್ರ ರತೀಶ್ ಕುಮಾರ್ ಹಾಗೂ ಗ್ರಾಮಸ್ಥರು ಹಾಜರಿದ್ದರು.