ಮಡಿಕೇರಿ, ಮಾ. 24: ಕೊಡಗು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಕಳಗಿ ಅವರ ನಿಗೂಢ ಸಾವಿನ ಕುರಿತು ಪೊಲೀಸ್ ಇಲಾಖೆ ತನಿಖೆ ಮುಂದುವರಿಸಿದೆ. ಈಗಾಗಲೇ ಕಳಗಿ ಅವರ ಕಾರಿಗೆ ಡಿಕ್ಕಿ ಪಡಿಸಿರುವ ಲಾರಿ ಚಾಲಕನನ್ನು ಪೊಲೀಸರು ಮತ್ತೆ ಮತ್ತೆ ವಿಚಾರಣೆಗೆ ಒಳಪಡಿಸಿರುವದಾಗಿ ತಿಳಿದು ಬಂದಿದೆ.

ಇನ್ನೊಂದೆಡೆ ತಾ. 19 ರಂದು ಮೇಕೇರಿ ಬಳಿ ದುರ್ಘಟನೆ ಬಳಿಕ ಹೊದ್ದೂರಿನ ಯುವಕರು ಜಿಲ್ಲಾ ಆಸ್ಪತ್ರೆಗೆ ಕಳಗಿ ದೇಹವನ್ನು ಸಾಗಿಸಿದ್ದರೆ, ಸಂಪಾಜೆಯ ದಂಪತಿ ತಮ್ಮ ಕಾರಿನಲ್ಲಿ ಜ. ತಿಮ್ಮಯ್ಯ ವೃತ್ತ ತನಕ ಬಂದಿರುವದು ದೃಢಪಟ್ಟಿದೆ. ಅಲ್ಲಿಂದ ಪತ್ನಿ ಬಸ್‍ನಲ್ಲಿ ಸಂಪಾಜೆಗೆ ಪ್ರಯಾಣಿಸಿದ್ದು, ಪತಿ ಮಾತ್ರ ಜಿಲ್ಲಾ ಆಸ್ಪತ್ರೆ ಬಳಿಯೇ ಇದ್ದುದಾಗಿ ಪ್ರತ್ಯಕ್ಷದರ್ಶಿಗಳು ‘ಶಕ್ತಿ’ಯೊಂದಿಗೆ ದೃಢಪಡಿಸಿದ್ದಾರೆ.

ಮಾತ್ರವಲ್ಲದೆ, ಆಕೆ ಸಂಪಾಜೆಯಲ್ಲಿ ಬಸ್‍ನಿಂದ ಇಳಿದು ನೇರವಾಗಿ ತನ್ನ ಮನೆಯತ್ತ ತೆರಳುತ್ತಿದ್ದಾಗ ಸಂಪಾಜೆಯ ನೆರೆಮನೆಯವರು ಬಾಲಚಂದ್ರ ಕಳಗಿ ಸಾವಿಗೀಡಾಗಿರುವ ಸುದ್ದಿ ತಿಳಿದು ಕಣ್ಣೀರಿನೊಂದಿಗೆ ಈ ಮಾರ್ಗವಾಗಿ ಬಂದಿದ್ದಾರೆ. ಅಷ್ಟರಲ್ಲಿ ಅಯ್ಯೋ... ಚಂದ್ರಣ್ಣ (ಬಾಲಚಂದ್ರ ಕಳಗಿ) ಹೋಗಿಬಿಟ್ಟರಂತೆ... ಎಂದು ಗ್ರಾಮವಾಸಿಗಳು ರೋಧಿಸಿದಾಗ, ಮೊದಲೇ ಮೇಕೇರಿ ಬಳಿ ಖುದ್ದು ಘಟನೆ ಎದುರುಗೊಂಡಿದ್ದಾಕೆ, ತನಗೇನೂ ಗೊತ್ತಿಲ್ಲವೆಂಬಂತೆ ನಟಿಸುತ್ತಾ, ಹೌದೇ... ಎಂದು ತಾನೂ ಅಳಲಾರಂಭಿಸಿದ್ದಳಂತೆ! ಆ ಬಳಿಕವೂ ಮೆಲ್ಲನೆ ಹಾಗೆಯೇ ತನ್ನ ಮನೆಗೆ ನಡೆದುಬಿಟ್ಟಳಂತೆ.!

ಇತ್ತ ಪತಿಯು ಕೂಡ ಸಂಪಾಜೆ ಪಯಸ್ವಿನಿ ಬ್ಯಾಂಕ್ ಕಟ್ಟಡದಲ್ಲಿರುವ ಅಂಗಡಿಯ ವರ್ತಕ ರವೀಂದ್ರ ಎಂಬವರನ್ನು ಮೊಬೈಲ್‍ನಲ್ಲಿ ಸಂಪರ್ಕಿಸಿ, ಸಂಜೆ ಸುಮಾರು 6.23ಕ್ಕೆ ಬಾಲಚಂದ್ರ ಕಳಗಿ ಅವರ ಕಾರಿಗೆ ಲಾರಿ ಡಿಕ್ಕಿಯಾಗಿ, ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ತಿಳಿಸಿದ್ದರಂತೆ; ಆ ಬಳಿಕ ಕೆಲವೇ ಕ್ಷಣದಲ್ಲಿ ಮತ್ತೊಂದು ಕರೆ ಮಾಡಿ, ಕಳಗಿ ಈಗಾಗಲೇ ಹೋಗಿಯಾಗಿದೆ. ನೀವು ಹೊರಟು ಬನ್ನಿ... ಎಂದು ಹೇಳಿದ್ದಾರೆ. ಇಲ್ಲಿಯೇ ಕಳಗಿ ಚಿಕ್ಕಪ್ಪ ಹಾಗೂ ಕುಟುಂಬ ಸಂಶಯ ಪಡಲು ಕಾರಣದೊಂದಿಗೆ ಪೊಲೀಸರಿಗೆ ದೂರು ನೀಡಿದಾಗಿದೆ. ಮೊದಲನೆಯದಾಗಿ ಹಗಲಿಡೀ ಕಳಗಿ ಜತೆ ಒಡನಾಟದಲ್ಲಿದ್ದು, ದುರ್ಘಟನೆ ಬಳಿಕ ಮನೆ ಮಂದಿ ಹಾಗೂ ಸಂಬಂಧಿಕರಿಗೆ ಈ ದಂಪತಿ ತಿಳಿಸದಿರಲು ಕಾರಣವೇನು? ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪೊಲೀಸರ ಸಹಿತ ಬಂಧುವರ್ಗ ಮೃತರ ಮೊಬೈಲ್‍ಗಾಗಿ ಹುಡುಕಾಟ ನಡೆಸಿದರೂ; ಅಲ್ಲೇ ಇದ್ದ ಪತಿರಾಯ ಯಾವದೇ ಮೌನ ಮುರಿಯಲಿಲ್ಲವೇಕೆ.?

ಮಾರನೆಯ ದಿವಸ ಬಾಲಚಂದ್ರ ಕಳಗಿ ಅವರ ಅಂತ್ಯಸಂಸ್ಕಾರದ ಬಳಿಕವಷ್ಟೇ ಮೊಬೈಲ್ ಹಿಂತಿರುಗಿಸಲು ಕಾರಣವೇನು? ಅವರು ಮೃತ್ಯುವಿಗೀಡಾಗುವ ಮೊದಲು ಸಂಭಾಷಣೆ ನಡೆಸಿರುವ ಕರೆಗಳು ಯಾರಿಂದ ಬಂದಿತ್ತು.? ಅದೆಲ್ಲಾ ಏಕೆ ಅಳಿಸುವ ಪ್ರಯತ್ನ ನಡೆಯಿತು; ಈ ದಂಪತಿ ಪಯಸ್ವಿನಿ ಬ್ಯಾಂಕ್ ಅಧ್ಯಕ್ಷರಾಗಿ ಕಳಗಿ ಅವರನ್ನು ಬಳಸಿಕೊಂಡು ಸಾಲ ಇತ್ಯಾದಿ ರೂಪದಲ್ಲಿ ಸಾಕಷ್ಟು ಹಣ ಪಡೆದಿರುವ ಆರೋಪವೂ ಕೇಳಿ ಬಂದಿದೆ. ಇಂತಹ ತೀರಾ ಪರಿಚಿತರು ಕಳಗಿ ಸಾವಿನ ಬಳಿಕ ಸಂಶಯದ ನಡೆ ತೋರುತ್ತಿರಲು ಕಾರಣವೇನು.?

ಮುಖ್ಯವಾಗಿ ಲಾರಿ ಚಾಲಕನಿಗೂ, ಸಂಪಾಜೆ ದಂಪತಿಗೂ ಮೊದಲೇ ಪರಿಚಯವಿದ್ದು, ಪೂರ್ವ ನಿಯೋಜಿತ ಪಿತೂರಿಯೊಂದಿಗೆ ಕೊಲೆ ನಡೆದು ಹೋಯಿತೇ ಎಂಬಿತ್ಯಾದಿ ಸಂಶಯದೊಂದಿಗೆ, ಮೃತರ ಚಿಕ್ಕಪ್ಪ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ತನಿಖಾ ತಂಡ ಖುದ್ದಾಗಿ ಸಂಪಾಜೆ ಪೊಲೀಸ್ ಉಪಠಾಣೆಗೆ ಈ ದಂಪತಿಯನ್ನು ಕರೆಸಿದ್ದಾರೆ. ಸುಮಾರು ಮೂರು ತಾಸು ಇಬ್ಬರಿಂದ ಪ್ರತ್ಯೇಕ ಪ್ರತ್ಯೇಕ ಹೇಳಿಕೆ ಪಡೆದುಕೊಂಡಿದ್ದಾರೆ. ಇನ್ನು ಅಲ್ಲಿನ ವರ್ತಕ ರವೀಂದ್ರ ಅವರಿಂದಲೂ ಮಾಹಿತಿ ಕಲೆ ಹಾಕಿದ್ದಾರೆ. ಒಟ್ಟಿನಲ್ಲಿ ಪೊಲೀಸರ ತನಿಖೆಯಿಂದಲೇ ಬಾಲಚಂದ್ರ ಕಳಗಿ ಸಾವಿನ ನಿಗೂಢತೆ ಬೆಳಕಿಗೆ ಬರಬೇಕಿದೆ.