ಮಡಿಕೇರಿ, ಮಾ. 24: ಕಾಫಿ ಬೆಳೆಗಾರರಿಗೆ ಕಳೆದ ಪ್ರಾಕೃತಿಕ ವಿಕೋಪದಲ್ಲಿ ನಷ್ಟಗೊಂಡ ಬೆಳೆಗೆ ಪರಿಹಾರ ನೀಡಲು ಎನ್ಡಿಆರ್ಎಫ್ನಿಂದ ಬೃಹತ್ ಪರಿಹಾರ ಮೊತ್ತ ಬಿಡುಗಡೆಗೊಂದಿದೆ. ಆದರೆ ಪರಿಹಾರ ನೀಡಿಕೆಗೆ ಮಾರ್ಗದರ್ಶಿ ಸೂತ್ರ ತೊಡಕುಂಟು ಮಾಡಿರುವದು ಕಂಡು ಬಂದಿದೆ ಎಂದು ಕಾಫಿ ಮಂಡಳಿಯ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.ಈಗಾಗಲೇ ಜಿಲ್ಲೆಯಲ್ಲಿ ಸುಮಾರು 42 ಸಾವಿರಕ್ಕೂ ಅಧಿಕ ಬೆಳೆಗಾರರಿಂದ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಲ್ಪಟ್ಟಿದೆ. ಎನ್ಡಿಆರ್ಎಫ್ನ ಸೂತ್ರದನ್ವಯ 5 ಎಕರೆ ಪ್ರದೇಶಕ್ಕೆ ಕಾಫಿ ಮತ್ತು ಕರಿಮೆಣಸು ಎರಡೂ ಸೇರಿದಂತೆ ಒಟ್ಟಾರೆ ನಷ್ಟ ಗರಿಷ್ಟ ಪ್ರಮಾಣವೆಂದರೆ ರೂ. 36 ಸಾವಿರ ನೀಡಲು ಸಾಧ್ಯವಿದೆ. ಇದಕ್ಕಿಂತ ಅಧಿಕ ನಷ್ಟಗೊಂಡಿದ್ದರೆ ಅಥವಾ ಕರಿಮೆಣಸು ಹಾಗೂ ಕಾಫಿ ನಷ್ಟಗೊಂಡ ಬೆಳೆಯ ಪ್ರತ್ಯೇಕ ಪ್ರಮಾಣದ ಅರ್ಜಿಯನ್ನು ನೀಡಲು ಸಾಧ್ಯವಿಲ್ಲ. ಎರಡೂ ಬೆಳೆಯು ಸೇರಿದಂತೆ ಮಾತ್ರ ಈ ಪರಿಹಾರ ಒದಗಿಸಲು ಸೂಚಿಸಲಾಗಿದೆ ಎಂದರು. ಈ ನಡುವೆ ಕೆಲವರು ಕೇವಲ ಒಂದು ಹೆಕ್ಟೇರ್ ಪ್ರದೇಶಕ್ಕೆ ಅರ್ಜಿ ಸಲ್ಲಿಸಿದಾಗ ಪೂರಕವಾದ ರೂ. 18 ಸಾವಿರ ಪರಿಹಾರದ ಬದಲು ಅಂತವರಿಗೆ ಎರಡು ಹೆಕ್ಟೇರ್ ಪ್ರದೇಶದ ಪರಿಹಾರ ಮೊತ್ತವಾದ ರೂ. 36 ಸಾವಿರವನ್ನು ಜಿಲ್ಲಾಡಳಿತದಿಂದ ನೀಡಲಾಗಿತ್ತು. ಇದೀಗ ಮಾರ್ಗಸೂಚಿಯನ್ವಯ ಹೆಚ್ಚಿಗೆ ಪ್ರಮಾಣದ ಪರಿಹಾರ ನೀಡಿದ್ದರಿಂದ ಇಂತಹ ಬೆಳೆಗಾರರ ಬ್ಯಾಂಕ್ ಅಕೌಂಟ್ನಿಂದ ಹೆಚ್ಚಿನ ಮೊತ್ತವಾದ ರೂ. 18 ಸಾವಿರವನ್ನು ವಾಪಾಸ್ ಪಡೆಯಲಾಗುತ್ತಿದೆ. ಅಲ್ಲದೆ ಕೆಲವರು ಈಗಾಗಲೇ ಪೂರ್ಣಹಣವನ್ನು ಬಳಸಿಕೊಂಡಿರುವದರಿಂದ ಅಂತವರಿಂದ ಅಧಿಕ ಪಾವತಿಯ ಹಣವನ್ನು ವಸೂಲಿ ಮಾಡಲು ನೋಟೀಸ್ ಕಳುಹಿಸಲಾಗುತ್ತಿದೆ ಎಂದು ಕಾವೇರಪ್ಪ ಮಾಹಿತಿಯಿತ್ತರು. ಇದೀಗ ಈ ಗೊಂದಲ ನಿವಾರಣೆಗೊಳಲು ಸೂಕ್ತ ಪರಿಹಾರ ಕ್ರಮಾನುಸರಣೆಗಾಗಿ ಉನ್ನತ ವಲಯದಲ್ಲಿ ತೀರ್ಮಾನ ಕೈಗೊಳ್ಳಬೇಕಾಗಿದೆ ಎಂದು ಕಾವೇರಪ್ಪ ಮನವಿ ಮಾಡಿದ್ದಾರೆ.