ಮಡಿಕೇರಿ, ಮಾ. 24: ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಏಪ್ರಿಲ್ 18 ರಂದು ನಡೆಯಲಿರುವ ಚುನಾವಣೆಗೆ ಅಖಾಡ ಸಿದ್ಧಗೊಳ್ಳುತ್ತಿದೆ. ಕೊಡಗು - ಮೈಸೂರು ಕ್ಷೇತ್ರದಲ್ಲೂ ಏ. 18ರಂದೇ ಚುನಾವಣೆ ನಡೆಯಲಿದ್ದು, ಈ ಕ್ಷೇತ್ರಕ್ಕೆ ಸ್ಪರ್ಧಾಳುಗಳು ನಾಮಪತ್ರ ಸಲ್ಲಿಸಲು ತಾ. 26 ಕೊನೆಯ ದಿನಾಂಕವಾಗಿದೆ. ಈ ಕ್ಷೇತ್ರದಲ್ಲಿ ಈಗಾಗಲೇ ಹಲವರು ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಿದ್ದರೂ ನೇರ ಹಣಾಹಣಿ ಇರುವದು ಮಾತ್ರ ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ಮೈತ್ರಿ ಅಭ್ಯರ್ಥಿಯ ನಡುವೆ ಎಂಬದರಲ್ಲಿ ಎರಡು ಮಾತಿಲ್ಲ. ಇನ್ನಿತರ ಪಕ್ಷ ಅಥವಾ ಪಕ್ಷೇತರರ ಸ್ಪರ್ಧೆಯಿಂದ ಮತಗಳು ವಿಭಜನೆಗೊಂಡು ಫಲಿತಾಂಶದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆಯಾದರೂ ಈ ಬಾರಿಯ ಸಮರ ನೇರವಾಗಿರುವದು ಬಿಜೆಪಿ ಹಾಗೂ ಕಾಂಗ್ರೆಸ್ - ಜೆಡಿಎಸ್ ದೋಸ್ತಿ ಅಭ್ಯರ್ಥಿಯ ನಡುವೆ ಮಾತ್ರ. 16ನೇ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಸಮೀಪದ ಪ್ರತಿಸ್ಪರ್ಧಿ ಈ ಚುನಾವಣೆಗಿಂತ ಮುಂಚಿನ ಅವಧಿಯಲ್ಲಿ ಲೋಕಸಭಾ ಸದಸ್ಯರಾಗಿದ್ದ ಕಾಂಗ್ರೆಸ್ನ ಅಡಗೂರು ವಿಶ್ವನಾಥ್ ಅವರನ್ನು ಪರಾಭವಗೊಳಿಸಿದ್ದರು. ಈ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯೊಂದಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಚಂದ್ರಶೇಖರಯ್ಯ ಅವರು ಸೇರಿದಂತೆ ಒಟ್ಟು 15 ಹುರಿಯಾಳುಗಳು ಸ್ಪರ್ಧೆ ಮಾಡಿದ್ದರು.ಆದರೆ 2018ರಲ್ಲಿ ಕರ್ನಾಟಕ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಫಲಿತಾಂಶದ ಬಳಿಕ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷ ಮೈತ್ರಿಯೊಂದಿಗೆ ಸಮ್ಮಿಶ್ರ ಸರಕಾರ ರಚಿಸಿದೆ.
(ಮೊದಲ ಪುಟದಿಂದ) ಇದಲ್ಲದೆ ಕಳೆದ ಅವಧಿಯಲ್ಲಿ ಕಾಂಗ್ರೆಸ್ನ ಅಭ್ಯರ್ಥಿಯಾಗಿದ್ದ ಅಡಗೂರು ವಿಶ್ವನಾಥ್ ಅವರು ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಹುಣಸೂರು ಕ್ಷೇತ್ರದಿಂದ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಚುನಾಯಿತರಾಗಿರುವದು ಮಾತ್ರವಲ್ಲ ರಾಜ್ಯ ಜೆಡಿಎಸ್ನ ಅಧ್ಯಕ್ಷರೂ ಆಗಿದ್ದಾರೆ.
ಹಲವು ಕಾರಣಗಳಿಂದಾಗಿ ಕೊಡಗು - ಮೈಸೂರು ಕ್ಷೇತ್ರವೂ ಈ ಬಾರಿ ರಾಜಕೀಯವಾಗಿ ಕುತೂಹಲ ಮೂಡಿಸಿದೆ. ಈಗಾಗಲೇ ಬಿಜೆಪಿಯಿಂದ ಹಾಲಿ ಸಂಸದ ಪ್ರತಾಪ್ಸಿಂಹ ಅವರು ಅಧಿಕೃತ ಅಭ್ಯರ್ಥಿಯಾಗಿದ್ದು, ಕಾಂಗ್ರೆಸ್ - ಜೆಡಿಎಸ್ನ ಸ್ಥಾನ ಹಂಚಿಕೆಯೊಂದಿಗೆ ಕಾಂಗ್ರೆಸ್ ಪಾಲಾಗಿರುವ ಈ ಕ್ಷೇತ್ರದಲ್ಲಿ ದೋಸ್ತಿ ಪಕ್ಷಗಳ ಅಭ್ಯರ್ಥಿಯಾಗಿ ಸಿ.ಎಚ್. ವಿಜಯಶಂಕರ್ ಅಂತಿಮಗೊಂಡಿದ್ದಾರೆ. ತಾ. 25 ರಂದು (ಇಂದು) ಈ ಇಬ್ಬರು ಅಭ್ಯರ್ಥಿಗಳೂ ತಮ್ಮ ಉಮೇದುವಾರಿಕೆಯನ್ನು ಸಲ್ಲಿಸಲಿದ್ದು, ಮೈಸೂರಿನಲ್ಲಿ ಕೊಡಗಿನ ಬೆಂಬಲಿಗರ ಪಾಲ್ಗೊಳ್ಳುವಿಕೆಯೊಂದಿಗೆ ರಾಜಕೀಯ ಚಟುವಟಿಕೆ ಗರಿಗೆದರಲಿದೆ. ಕೊಡಗು - ಮೈಸೂರು ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡ ಬಳಿಕ ಒಟ್ಟು 9 ಮಂದಿ ನಾಮಪತ್ರ ಸಲ್ಲಿಸಿದ್ದಾರೆ.