ಸಿದ್ದಾಪುರ, ಮಾ. 24: ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಆದಿವಾಸಿಗಳಿಗೆ ನೀಡಿದ ಹಕ್ಕುಪತ್ರದ ಜಾಗದಲ್ಲಿ ಸಾರ್ವಜನಿಕ ರಸ್ತೆ ಕಾಮಗಾರಿ ಮಾಡಲು ಮುಂದಾಗಿರುವದನ್ನು ವಿರೋಧ ವ್ಯಕ್ತಪಡಿಸಿ ಕಾಮಗಾರಿಯನ್ನು ತಡೆ ಹಿಡಿದ ಘಟನೆ ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ಕಲ್ಲಳ ಗಿರಿಜನ ಹಾಡಿಯಲ್ಲಿ ನಡೆದಿದೆ. ಮಾಲ್ದಾರೆ ಗ್ರಾ.ಪಂ. ವ್ಯಾಪ್ತಿಯ ದೊಡ್ಡಹಡ್ಲು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದರೂ ಕೂಡ ಗಿರಿಜನ ಕಾಲೋನಿ ಮೂಲಕ ಹಕ್ಕುಪತ್ರ ನೀಡಿದ ಜಾಗದಲ್ಲಿ ರಾತ್ರೋರಾತ್ರಿ ಜೆ.ಸಿ.ಬಿ. ಯಂತ್ರವನ್ನು ಬಳಸಿ ರಸ್ತೆ ಕಾಮಗಾರಿ ಮಾಡಲು ಮುಂದಾಗಿರುವದನ್ನು ಖಂಡಿಸಿ ಕಾಲೋನಿಯ ಆದಿವಾಸಿಗಳು ತಡೆಹಿಡಿದಿದ್ದಾರೆ. ಗ್ರಾಮಕ್ಕೆ ಸಾರ್ವಜನಿಕ ರಸ್ತೆ ಮಾಡಲು ಹೊರಟಿರುವದು ಸರಿಯಾದ ಕ್ರಮವಲ್ಲವೆಂದು ಆದಿವಾಸಿಗಳು ಅಸಮಾಧಾನ ವ್ಯಕ್ತ ಪಡಿಸಿದರು. ಪರ್ಯಾಯ ರಸ್ತೆ ಇದ್ದರೂ ಕೂಡ ಹಕ್ಕುಪತ್ರ ನೀಡಿದ ಜಾಗದಲ್ಲಿ ರಸ್ತೆ ಕಾಮಗಾರಿ ಮಾಡಲು ಯಾವದೇ ಕಾರಣಕ್ಕೂ ಬಿಡುವದಿಲ್ಲವೆಂದು ತಿಳಿಸಿದರು.

ಈ ಸಂದರ್ಭ ಆದಿವಾಸಿಗಳಾದ ಇಂದಿರಾ, ಲಿಂಗ, ರುಕ್ಕು, ತಮ್ಮಯ್ಯ, ರಾಜ, ದೇವರಾಜ ಇನ್ನಿತರರು ಹಾಜರಿದ್ದರು.