ಮಡಿಕೇರಿ, ಮಾ. 24: ಇಲ್ಲಿನ ಐತಿಹಾಸಿಕ ರಾಜರ ಕೋಟೆಗೆ ಭಾರತೀಯ ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯಿಂದ ಕಾಯಕಲ್ಪದೊಂದಿಗೆ, ಕೋಟೆಯ ಮೂಲ ಸ್ವರೂಪವನ್ನು ಸಂರಕ್ಷಿಸುವ ದಿಸೆಯಲ್ಲಿ ಕೆಲಸ ಸಾಗಿದೆ. ಅಲ್ಲದೆ ಕೋಟೆಯ ಆವರಣ ಸುತ್ತಲೂ ಅಲ್ಲಲ್ಲಿ ಹಾನಿಗೊಂಡಿರುವ ಕಡೆಗಳಲ್ಲಿ ಬಿರುಕುಗಳನ್ನು ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಭಾರತೀಯ ಪ್ರಾಚ್ಯವಸ್ತು ಇಲಾಖೆಯ ಬೆಂಗಳೂರು ಕಚೇರಿ ಅಧಿಕಾರಿ ಅಮೃತೇಶ್ವರಿ ಅವರನ್ನು ‘ಶಕ್ತಿ’ ಸಂಪರ್ಕಿಸಿದಾಗ ರೂ. 25 ಲಕ್ಷ ಮೊತ್ತದಲ್ಲಿ ಪ್ರಸಕ್ತ ಕೆಲಸ ಕೈಗೊಂಡಿರುವದಾಗಿ ಮಾಹಿತಿ ನೀಡಿದ್ದಾರೆ.ಅಲ್ಲದೆ ಶಿಥಿಲಗೊಂಡಿರುವ ಅರಮನೆಯು ಅಳಿಯುವ ಸ್ಥಿತಿಯಲ್ಲಿರುವ ಬಗ್ಗೆ ಗಮನ ಸೆಳೆದಾಗ, ಈ ಹಿಂದೆಯೇ ರೂ. 5 ಕೋಟಿಯ ಕ್ರೀಯಾಯೋಜನೆ ಸಿದ್ಧಪಡಿಸಿ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವದಾಗಿ ಖಚಿತ ಪಡಿಸಿದ್ದಾರೆ. ಕೊಡಗು ಜಿಲ್ಲಾ ಆಡಳಿತ ಅರಮನೆ ಕಟ್ಟಡವನ್ನು ತೆರವುಗೊಳಿಸಿ ಪ್ರಾಚ್ಯವಸ್ತು ಇಲಾಖೆಯ ಸ್ವಾಧೀನಕ್ಕೆ ಬಿಟ್ಟುಕೊಟ್ಟರೆ, ಆ ಕೂಡಲೇ ಅರಮನೆಯನ್ನು ನವೀಕರಿಸಲು ಕ್ರಮ ವಹಿಸಲಾಗುವದು ಎಂದು ಮಾಹಿತಿ ನೀಡಿದ್ದಾರೆ.ಭರದಿಂದ ಕೆಲಸ : ಗುತ್ತಿಗೆ ಸಂಸ್ಥೆಯ ಉಸ್ತುವಾರಿ ನೋಡಿಕೊಳ್ಳುತ್ತಿರುವ ಜಗದೀಶ್ ಪ್ರಕಾರ, ಈ ಹಿಂದೆ ಮೈಸೂರು ಕೋಟೆ, ಚಿತ್ರದುರ್ಗ ಕೋಟೆ ಕೆಲಸ ಮಾಡಿರುವ ಅನುಭವದೊಂದಿಗೆ ಮಡಿಕೇರಿಯ ಕೋಟೆಯ ಅಭಿವೃದ್ಧಿ ಕೆಲಸ ನಿರ್ವಹಿಸಲಾಗುತ್ತಿದೆ. ಅರಮನೆ ಹೊರ ಆವರಣ ಕೋಟೆ ಸುತ್ತಲಿನ ಕಲ್ಲು ಕಟ್ಟಡದ ಬಿರುಕುಗಳನ್ನು ಸರಿಪಡಿಸಲಾಗುತ್ತಿದೆ. ಅಲ್ಲಲ್ಲಿ ಹಾನಿಗೊಂಡಿರುವ ಗಾರೆ ಇತ್ಯಾದಿಯನ್ನು ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ನವೀಕರಿಸಲಾಗುತ್ತಿದೆ ಎಂದು ‘ಶಕ್ತಿ’ಗೆ ತಿಳಿಸಿದರು.ಗುಣಮಟ್ಟಕ್ಕೆ ಒತ್ತು : ಹಲವು ಶತಮಾನಗಳ ಇತಿಹಾಸವಿರುವ ಈ ಕೋಟೆಯ ಅಲ್ಲಲ್ಲಿ ಹಾನಿಯನ್ನು ಸರಿಪಡಿಸುತ್ತಿದ್ದು, ಹಿಂದಿನ ಗಾರೆ ಕೆಲಸಕ್ಕೆ ಚ್ಯುತಿ ಬಾರದಂತೆ ಪ್ರಾಚ್ಯವಸ್ತು ಇಲಾಖೆಯ ತಂತ್ರಜ್ಞರ ಸಲಹೆಯಂತೆ ಕಾಮಗಾರಿ ನಡೆಯುತ್ತಿದೆ ಎಂದು ಮಾಹಿತಿ ನೀಡಿದರು. ಅಲ್ಲದೆ ಅಪರೂಪದ ಈ ಕಲ್ಲು ಗೋಡೆಗಳನ್ನು ಅಲ್ಲಲ್ಲಿ ಮರ, ಬೇರು ಇತ್ಯಾದಿಯಿಂದ ಗೋಚರಿಸಿರುವ ಬಿರುಕುಗಳನ್ನು ನಾಜೂಕು ಕೆಲಸದಿಂದ ಯಥಾಸ್ಥಿತಿಯಲ್ಲಿ ನವೀಕರಿಸಲಾಗುತ್ತಿದೆ ಎಂದರು. ಹಿಂದೆ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ಮಾಡಿ, ಮುಖ್ಯಸ್ಥೆ ಸುಧಾಮೂರ್ತಿ ಅವರಿಂದ ಗೌರವಿಸಲ್ಪಟ್ಟಿರುವ ಕೆಲಸಗಾರರ ತಂಡ ಈ ಕೋಟೆಯ ಕಾಮಗಾರಿ ನಿರ್ವಹಿಸುತ್ತಿರುವದಾಗಿ ನೆನಪಿಸಿದರು.

ಅರಮನೆ ಇತಿಹಾಸ : ಸ್ವಾತಂತ್ರ್ಯ ಪೂರ್ವದಲ್ಲಿ ನಾಲ್ಕಾರು ಶತಮಾನ ಆಳ್ವಿಕೆ ನಡೆಸಿದ್ದ ಕೊಡಗಿನ ರಾಜರುಗಳ ಅರಮನೆ ತೀರಾ ಅಳಿವಿನ ಅಂಚಿನಲ್ಲಿ ಇದ್ದು, ಮೇಲ್ಚಾವಣಿ ಮಾಡುವಿನ ಹೆಂಚು, ತಗಡಿನ ಸೀಟುಗಳು, ಮರಮುಟ್ಟು ಎಲ್ಲವೂ ನಾಲ್ಕು ನಿಟ್ಟಿನಲ್ಲಿ ನೆಲಕಚ್ಚುವಂತಾಗಿದೆ; ಮಾತ್ರವಲ್ಲದೆ ಅರಮನೆ ಯಾವದೇ ಸಂದರ್ಭ ಅಳಿಯುವಂತಹ ಅಪಾಯ ಕಾಣತೊಡಗಿದೆ. ಈ ಬಗ್ಗೆ ಭಾರತೀಯ ಪ್ರಾಚ್ಯವಸ್ತು ಪುರಾತತ್ವ ಇಲಾಖೆಯು ಕಾಳಜಿ ವಹಿಸುತ್ತಿಲ್ಲ ಎಂಬ ಅಸಮಾಧಾನವು ಜನವಲಯದಲ್ಲಿ ವ್ಯಕ್ತಗೊಳ್ಳತೊಡಗಿದೆ. ಅಲ್ಲದೆ ಐತಿಹಾಸಿಕ ಅರಮನೆ ಧರಾಶಾಹಿಯಾಗುವ ಮುನ್ನ ಸರಿಪಡಿಸುವಂತೆ ಆಗ್ರಹಿಸಿದ್ದಾರೆ.

ಈ ನಡುವೆ ಕಳೆದ ಮುಂಗಾರು ಆರಂಭದಲ್ಲಿ ಕೋಟೆಯ ಸುತ್ತಲೂ ರೂ. 25 ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ರೈಲ್ವೆ ಕಂಬಿಗಳ ಬಳಕೆಯೊಂದಿಗೆ ತಂತಿ ಬೇಲಿ ಸಹಿತ ತಡೆಗೋಡೆ ನಿರ್ಮಾಣದ ಕಾಮಗಾರಿ ಗೋಚರಿಸಿತು. ಆಗ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ವಿಚಾರಿಸಲಾಗಿ, ಆದಷ್ಟು ಬೇಗ ಒಟ್ಟಾರೆ ಕೋಟೆಯ ದುರಸ್ಥಿಯೊಂದಿಗೆ, ಕೋಟೆ ಮಹಿಳಾ ಸಮಾಜ, ಮತ್ತಿತರ ಕಟ್ಟಡಗಳನ್ನು ತೆರವುಗೊಳಿಸಿ, ಪ್ರವಾಸಿಗಳ ವೀಕ್ಷಣೆಗೆ ಕೋಟೆ ಹಾಗೂ ಅರಮನೆಯನ್ನು ನವೀಕರಿಸುವ ಮಾತು ಹೇಳಿ ಬಂತು. ಈ ಬಗ್ಗೆ ಅನೇಕ ಸಂಸ್ಥೆಗಳು, ಸಾರ್ವಜನಿಕರು ಪ್ರಾಚ್ಯವಸ್ತು ಇಲಾಖೆಯ ಗಮನ ಸೆಳೆದಿದೆ. ಆದರೆ ಈ ಕೆಲಸದ ನಡುವೆ ಕೋಟೆ ಮಹಿಳಾ ಸಮಾಜ (ಮೊದಲ ಪುಟದಿಂದ) ಬಳಿ ಸಾರ್ವಜನಿಕ ಶೌಚಾಲಯದ ಕಾಮಗಾರಿಯೂ ಗೋಚರಿಸಿತು. ಈ ಸಂಬಂಧ ಕಲ್ಲು ಕಟ್ಟಡ ಕೂಡ ತಲೆಯೆತ್ತಿದೆ. ಹೀಗಿದ್ದೂ ಮಳೆಗಾಲ ಕಳೆದು ಮತ್ತೊಂದು ಮುಂಗಾರು ಸಮೀಪಿಸುತ್ತಿದೆ.

ಮತ್ತೆ ದುರಸ್ತಿ : ಈ ನಡುವೆ ಕೋಟೆ ಪೂರ್ವದ್ವಾರದ ಬಳಿ ತಡೆಗೋಡೆಗೆ ಹೊಂದಿಕೊಂಡಿರುವ ಶ್ರೀ ಮಹಾಗಣಪತಿ ದೇವಾಲಯ ಬಳಿ ಕಳೆದ ಹತ್ತಾರು ದಿನಗಳಿಂದ ಮೇಲ್ಚಾವಣಿ ಗಾರೆಯ ಬಿರುಕುಗಳನ್ನು ದುರಸ್ತಿಗೊಳಿಸುವ ಕಾಮಗಾರಿ ಸಾಗಿದೆ.

ಅರಮನೆ ನಿರ್ಲಕ್ಷ್ಯ : ಒಂದೆಡೆ ಕೊಡಗಿನ ಪಾರಂಪರಿಕ ಶೈಲಿಯ ಇದೇ ಕೋಟೆಯೊಳಗಿರುವ ಅರಮನೆ, ಬಹುಪಾಲು ಮೇಲ್ಚಾವಣಿ ಅಲ್ಲಲ್ಲಿ ನೆಲಕಚ್ಚುತ್ತಾ ಅಳಿಯತೊಡಗಿರುವದು ಗೋಚರಿಸುತ್ತಿದೆ; ಇನ್ನೊಂದೆಡೆ ಹಳೆಯ ಕಾಲದ ವಿದ್ಯುತ್ ವಯರಿಂಗ್ ಇತ್ಯಾದಿ ಅಲ್ಲಲ್ಲಿ ನೇತಾಡುತ್ತಾ, ಮರದ ಕಂಬಗಳು, ಇನ್ನಿತರ ಸಾಮಗ್ರಿ ಸಹಿತ ಮಳೆಯ ನೀರಿನ ಸೋರುವಿಕೆಯೊಂದಿಗೆ ಗೋಡೆಗಳು ಅಪಾಯಲ್ಲಿವೆ. ಕೆಲವೆಡೆ ಕಬ್ಬಿಣ ಇತ್ಯಾದಿ ಸರಳುಗಳನ್ನು ಅಡ್ಡಲಾಗಿ ನಿಲ್ಲಿಸಿ ಧರಾಸಾಯಿಯಾಗುತ್ತಿರುವ ಕಟ್ಟಡಕ್ಕೆ ತಾತ್ಕಾಲಿಕ ರಕ್ಷಿಸಲಾಗಿದೆ.

ಇಂತಹ ಪರಿಸ್ಥಿತಿ ನಡುವೆ ಪ್ರಾಚ್ಯವಸ್ತು ಇಲಾಖೆ ಮಂದಿ ಸಂಬಂಧಿಸಿದ ಅರಮನೆ ರಕ್ಷಣೆಗೆ ಮುಂದಾಗಿಲ್ಲ; ಬದಲಾಗಿ ಜಿ.ಪಂ. ಆಡಳಿತ ಅರಮನೆ ಕಟ್ಟಡವನ್ನು ಇಲಾಖೆಗೆ ಬಿಟ್ಟುಕೊಡಲು ಸೂಚಿಸಿರುವದಾಗಿ ಹೇಳಿಕೊಳ್ಳುತ್ತಾ ವರ್ಷಗಳೇ ಉರುಳುವಂತಾಗಿದೆ. ಹೀಗಿದ್ದೂ, ಈಗ ಕೈಗೊಂಡಿರುವ ಕೋಟೆಯ ಅಲ್ಲಲ್ಲಿ ಬಿರುಕುಗಳನ್ನು ಮುಚ್ಚುವ ಕೆಲಸಕ್ಕೆ ಮುಂದಾಗಿರುವದು ಗೋಚರಿಸಿದೆ. ಈ ಬಗ್ಗೆ ಬೆಂಗಳೂರಿನ ಸಂಬಂಧಿಸಿದ ಕಚೇರಿಯನ್ನು ಸಂಪರ್ಕಿಸಿದಾಗ, ಕೋಟೆಯ ಅಲ್ಲಲ್ಲಿ ಇಂತಹ ಬಿರುಕುಗಳನ್ನು ಸರಿಪಡಿಸುವ ಕೆಲಸ ಕೈಗೊಂಡಿರುವದಾಗಿ ಮಾಹಿತಿ ಲಭಿಸಿದೆ.

ರೂ. 15 ಲಕ್ಷ : ಈಗ ತಕ್ಷಣಕ್ಕೆ ಕೋಟೆಯ ಅಲ್ಲಲ್ಲಿ ಮಳೆಗಾಲದಲ್ಲಿ ನೀರಿನ ತೇವಾಂಶ ಒಳಹೊಕ್ಕದಂತೆ; ರೂ. 15 ಲಕ್ಷದಲ್ಲಿ ದುರಸ್ತಿ ಕೈಗೊಂಡಿರುವದಾಗಿ ತಿಳಿಸಿದ್ದಾರೆ.

ಚುನಾವಣೆ ಬಳಿಕ ಸ್ಥಳಾಂತರ : ಕೊಡಗು ಜಿಲ್ಲಾ ಪಂಚಾಯಿತಿಯಿಂದ ಮಡಿಕೇರಿಯ ಗಾಲ್ಫ್ ಬಳಿ ನೂತನ ಕಟ್ಟಡ ಕಾಮಗಾರಿ ಮುಕ್ತಾಯ ಹಂತದಲ್ಲಿದೆ; ಈ ಕೆಲಸ ಸದ್ಯದಲ್ಲೇ ಪೂರ್ಣಗೊಳ್ಳಲಿದ್ದು, ಪ್ರಸಕ್ತ ಲೋಕಸಭಾ ಚುನಾವಣೆ ಮುಗಿದ ನಂತರ ಜಿ.ಪಂ. ಆಡಳಿತವನ್ನು ನೂತನ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುವದು. ಬಹುಶಃ ಮುಂಗಾರು ಮಳೆಗೆ ಮುಂಚಿತವಾಗಿ, ಕೋಟೆ ಆವರಣದಲ್ಲಿರುವ ಜಿ.ಪಂ. ಆಡಳಿತ ಕಚೇರಿಗಳನ್ನು ಹೊಸ ಸಂಕೀರ್ಣಕ್ಕೆ ಸ್ಥಳಾಂತರಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಅಧಿಕೃತವಾಗಿ ತೀರ್ಮಾನ ತೆಗೆದುಕೊಳ್ಳಲಾಗುವದು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮೀಪ್ರಿಯ ‘ಶಕ್ತಿ’ಗೆ ತಿಳಿಸಿದ್ದಾರೆ.