ಮಡಿಕೇರಿ, ಮಾ. 24: ಅಪ್ಪಂಗಳದ ಐಸಿಎಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರದಲ್ಲಿ ಅಡಿಕೆ ಮತ್ತು ಸಂಬಾರ ಬೆಳೆಗಳ ಅಭಿವೃದ್ಧಿ ನಿರ್ದೇಶನಾಲಯ, ಕೋಜಿಕೋಡು ಪ್ರಾಯೋಜಿತ “ಸಂಬಾರ ಬೆಳೆಗಳ (ಏಲಕ್ಕಿ, ಶುಂಠಿ, ಕಾಳುಮೆಣಸು) ಉತ್ಪಾದನೆ ಮತ್ತು ಗುಣಮಟ್ಟದ ಸುಧಾರಣೆಯಲ್ಲಿ ವೈಜ್ಞಾನಿಕ ಮತ್ತು ತಂತ್ರಜ್ಞಾನದ ಪ್ರಾಮುಖ್ಯತೆ”ಯ ಬಗ್ಗೆ ಒಂದು ದಿನದ ‘ರೈತರಿಗೆ ತರಬೇತಿ’ ಕಾರ್ಯಕ್ರಮ ನಡೆಯಿತು. ಉದ್ವಾಟನೆ ಯನ್ನು ಕೋಜಿಕೋಡು ಡಿಎಎಸ್‍ಡಿ. ನಿರ್ದೇಶಕ ಡಾ. ಹೋಮಿ ಚೆರಿಯನ್ ನೆರವೇರಿಸಿದರು. ಕಾಫಿ ಬೋರ್ಡ್ ಮಾಜಿ ಅಧ್ಯಕ್ಷ ಐ.ಸಿ.ಎ.ಆರ್-ಐ.ಐ.ಎಸ್.ಆರ್ ಪ್ರಾದೇಶಿಕ ಕೇಂದ್ರದ ಮುಖ್ಯಸ್ಥ ಡಾ. ಎಸ್.ಜೆ. ಅಂಕೇಗೌಡ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ತರಬೇತಿ ಕಾರ್ಯಕ್ರಮದ ಉಪನ್ಯಾಸ ಕೈಪಿಡಿಯನ್ನು ಬಿಡುಗಡೆ ಮಾಡ ಲಾಯಿತು. ತರಬೇತಿ ಕಾರ್ಯಕ್ರಮದಲ್ಲಿ ಕಾಳುಮೆಣಸು, ಏಲಕ್ಕಿ ಮತ್ತು ಶುಂಠಿಯ ಆಧುನಿಕ ಉತ್ಪಾದನೆ ಮತ್ತು ಸಂಸ್ಕರಣಾ ತಂತ್ರಜ್ಞಾನಗಳ ಬಗ್ಗೆ ಒತ್ತು ನೀಡ ಲಾಯಿತು. ಸಂಬಾರ ಬೆಳೆಗಳ ಇಳುವರಿ ಮತ್ತು ಗುಣಮಟ್ಟವನ್ನು ವೃದ್ಧಿಸಲು ಸುಧಾರಿತ ತಳಿಗಳ ಪಾತ್ರ, ಗುಣಮಟ್ಟದ ಸಸ್ಯಾಭಿವೃದ್ಧಿಯ ವಿಧಾನ, ಸಂಬಾರ ಬೆಳೆಗಳ ಉತ್ಪಾದನೆಯಲ್ಲಿ ಕೃಷಿಕತೆ ಮತ್ತು ಶಾರೀರಿಕ ತಂತ್ರಜ್ಞಾನ, ಸಂಬಾರ ಬೆಳೆಗಳ ಕೃಷಿಯಲ್ಲಿ ಜೈವಿಕ ಒತ್ತಡಗಳು ಮತ್ತು ಅವುಗಳ ನಿರ್ವಹಣೆ ಹಾಗೂ ಸಂಬಾರ ಬೆಳೆಗಳ ಕೊಯ್ಲೋತ್ತರ ತಾಂತ್ರೀಕತೆ ಮತ್ತು ಮೌಲ್ಯವರ್ಧನೆಯ ಬಗ್ಗೆ ಐಸಿಎಆರ್-ಐಐಎಸ್‍ಆರ್‍ನ ನುರಿತ ವಿಜ್ಞಾನಿಗಳಿಂದ ಮಾಹಿತಿ ನೀಡಲಾಯಿತು. ಪ್ರಗತಿಪರ ರೈತ ನಂದ ಬೆಳ್ಳಿಯಪ್ಪ, ಸೂರ್ಯ ಕಿರಣ್ ಎಸ್ಟೇಟ್, ಹಟ್ಟಿಹೊಳೆ ಇವರು ಸಂಬಾರ ಬೆಳೆಗಳ ಕೃಷಿಯಲ್ಲಿ ತಮ್ಮ ಅನುಭವ ಹಂಚಿಕೊಂಡರು. ಈ ಸಮಯದಲ್ಲಿ ಪ್ರದರ್ಶನ ಮಳಿಗೆಯನ್ನು ಸಹ ಆಯೋಜಿಸಲಾಗಿತ್ತು. ರಾಜ್ಯದ ವಿವಿಧ ಭಾಗಗಳಿಂದ ರೈತರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.