ವಿಶೇಷ ಸಂದರ್ಶನ
ಹೆಚ್.ಕೆ. ಜಗದೀಶ್
ಗೋಣಿಕೊಪ್ಪಲು, ಮಾ. 24: ತನ್ನ ಬಾಲ್ಯದ ದಿನದಲ್ಲಿ ಸೇನೆಗೆ ಸೇರಬೇಕೆಂಬ ಮಹಾದಾಸೆ ಹೊಂದಿದ್ದ ಯುವಕನಿಗೆ ಆ ಅವಕಾಶ ದೊರೆಯುತ್ತಿದ್ದಂತೆಯೇ ಆದ ಸಂತೋಷಕ್ಕೆ ಪಾರವೇ ಇರಲಿಲ್ಲ. ಜೀವನದಲ್ಲಿ ಮುಂದೆಯೂ ಸೇನೆಗೆ ಇನ್ನಷ್ಟು ಸೇವೆ ನೀಡಲು ಕಟಿಬದ್ಧನಾಗಿ, ಕೊಡಗಿನ ಯುವಕರು ಹೆಚ್ಚು ಹೆಚ್ಚಾಗಿ ದೇಶ ಸೇವೆಗೆ ಮುಂದೆ ಬರಬೇಕು. ನಮ್ಮ ದೇಶವನ್ನು ರಕ್ಷಿಸುವ ಜವಾಬ್ದಾರಿ ನಮ್ಮ ಯುವಕರ ಮೇಲಿದೆ ಎಂದು ತಮ್ಮ ಮನದಾಳದ ಅಭಿಪ್ರಾಯಗಳನ್ನು ಶೌರ್ಯ ಚಕ್ರ ಪ್ರಶಸ್ತಿ ವಿಜೇತ ಹೆಚ್.ಎಂ. ಮಹೇಶ್ ‘ಶಕ್ತಿ’ಯೊಂದಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ತಮ್ಮ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಜಿಲ್ಲೆಯ ವೀರತೆಗೆ ನಿರ್ಭೀತಿ ಹಾಗೂ ಆದಮ್ಯ ಇಚ್ಚಾಶಕ್ತಿಯುಳ್ಳ ಸಿಪಾಯಿ ಎಂದು ಮೆಚ್ಚುಗೆ ವ್ಯಕ್ತಪಡಿಸಿ ಸೇನೆಯಿಂದ ಇತ್ತೀಚೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಪ್ರತಿಷ್ಠಿತ ಶೌರ್ಯ ಚಕ್ರ ಪ್ರಶಸ್ತಿ ಗೌರವ ಪಡೆದು, ಕೊಡಗು ಜಿಲ್ಲೆಯ ಪೊನ್ನಂಪೇಟೆಯ ಮಹಾತ್ಮಗಾಂಧಿ ನಗರದಲ್ಲಿರುವ ತನ್ನ ಮನೆಗೆ ಆಗಮಿಸಿದ ಸಂದರ್ಭ ಮಹೇಶ್ ಅವರನ್ನು ‘ಶಕ್ತಿ’ ಮಾತನಾಡಿಸಿತು.
ನಾಗರಾಜ್ ಮತ್ತು ಲಕ್ಷ್ಮಿ ದಂಪತಿ ಪುತ್ರನಾಗಿರುವ ಹೆಚ್.ಎನ್. ಮಹೇಶ್
ಜಮ್ಮು-ಕಾಶ್ಮೀರದ ಟೆರರಿಸ್ಟ್ಗಳನ್ನು ನಿಗ್ರಹ ಮಾಡುವ ತಂಡದಲ್ಲಿ ವಿಶೇಷ ನಿಪುಣತೆ ಪಡೆದ ಇವರಿಗೆ ಹಿರಿಯ ಅಧಿಕಾರಿಗಳು ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದರು. ಹಿರಿಯ ಅಧಿಕಾರಿ ಭೀಷ್ಮಪಾಲ್ ಎಂದರೆ ಮಹೇಶ್ಗೆ ಅಚ್ಚುಮೆಚ್ಚು. ದೇಶ ರಕ್ಷಣೆಗೆ ಇವರಿಂದ ಕಲಿತ ವಿದ್ಯೆ ಇಂದು ಇವರಿಗೆ ಪ್ರತಿಷ್ಠಿತ ಶೌರ್ಯ ಚಕ್ರ ಪ್ರಶಸ್ತಿಗೆ ಕಾರಣವಾಗಿದೆ ಎನ್ನುತ್ತಾರೆ ಮಹೇಶ್...
ಜಮ್ಮು-ಕಾಶ್ಮಿರದಲ್ಲಿ ನಡೆದ ಭಯೋತ್ಪಾದಕರ ದಿಢೀರ್ ದಾಳಿ ಸಂದರ್ಭ ಈ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ಸಂದರ್ಭ ಜೀವವನ್ನು ಪಣಕ್ಕಿಟ್ಟು ಉಗ್ರರನ್ನು ಸದೆ ಬಡಿದÀು ಹಿಮ್ಮೆಟ್ಟಿಸುವ ಕಾರ್ಯಾಚರಣೆಯನ್ನು ನೆನಪಿಸಿಕೊಳ್ಳುವ ಮಹೇಶ್ ಈ ಸಂದರ್ಭದಲ್ಲಿ ತಮ್ಮನ್ನು ತಾವೇ ಮರೆತಿರುತ್ತೇವೆ. ಉಗ್ರರನ್ನು ಹೊಡೆದುರುಳಿಸುವದಷ್ಟೇ ನಮ್ಮ ಕೆಲಸ. ಮುಂದಾಗಬಹುದಾದ ಅನಾಹುತವನ್ನು ನಾವು ಗಮನಿಸುವದಿಲ್ಲ ಎಂಬ ರೋಮಾಂಚಕಾರಿ ಘಟನೆಗಳನ್ನು ಹಂಚಿಕೊಂಡರು.
ಶಾಲಾ ದಿನದಲ್ಲಿ ಪೇಪರ್, ಹಾಲು ವಿತರಿಸುವ ಕೆಲಸದಲ್ಲಿ ನಿರ್ವಹಿಸಿಕೊಂಡು ವಿದ್ಯಾಭ್ಯಾಸ ನಡೆಸಿದ ಮಹೇಶ್ ಮುಂಜಾನೆ ಶಾಲಾ ಮೈದಾನದಲ್ಲಿ ತಮ್ಮ ಫಿಟ್ನೆಸ್ಗಾಗಿ ತಾಲೀಮು ನಡೆಸುತ್ತಿದ್ದರು. ಪ್ರತಿನಿತ್ಯ ಸೇನೆಯ ಬಗ್ಗೆ ಹಳೆಯ ಸಿನಿಮಾಗಳನ್ನು ವೀಕ್ಷಿಸುತ್ತಿದ್ದ ಮಹೇಶ್ ಇವರಂತೆ ನಾನಾಗಬೇಕೆಂಬ ಕನಸು ಕಂಡಿದ್ದರು. ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಹಾಗೂ ಜನರಲ್ ತಿಮ್ಮಯ್ಯ ಅವರೇ ಸ್ಪೂರ್ತಿ ಎಂದು ತಮ್ಮ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು. ಸೇನೆಗೆ ಸೇರುವ ಯುವಕರಿಗೆ ಅವಕಾಶ ಬಂದೊದಗಿದಾಗ ಹೆತ್ತವರು ಪ್ರೀತಿಯಿಂದ ಬೀಳ್ಕೊಡಬೇಕು ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ ಮಹೇಶ್, ತಾನು ಸೇನೆಗೆ ಹೋಗುವ ಸಂದರ್ಭ ಸೂಕ್ತ ದಾಖಲಾತಿಗಳಿಗೆ ಅಧಿಕಾರಿಗಳು ವಿಳಂಬ ಮಾಡಿದ ಸಂದರ್ಭ ಅನುಭವಿಸಿದ ನೋವು ಮರೆಯಲು ಸಾಧ್ಯವಿಲ್ಲ. ಅಂತಹ ಸಂದರ್ಭದಲ್ಲಿ ಸಮಾಜ ಸೇವಕ ಸಾಜಿ ಅಚ್ಚುತ್ತನ್ ತಾವೇ ಮುಂದೆ ಬಂದು ಅಧಿಕಾರಿಗಳಿಂದ ದೃಢೀಕರಣಗೊಂಡ ದಾಖಲಾತಿಗಳನ್ನು ಕೊಡಿಸುವಲ್ಲಿ ಸಹಕರಿಸಿದ್ದರು. ಇಂತಹ ಸಂದರ್ಭಗಳನ್ನು ಮರೆಯಲು ಸಾಧ್ಯವಿಲ್ಲ ಎನ್ನುತ್ತ ನಗುನಗುತ್ತಲೇ ಇನ್ನು ಕೆಲವು ದಿನಗಳಲ್ಲಿ ಮತ್ತೆ ಸೇನೆಗೆ ತೆರಳಿ ಕರ್ತವ್ಯ ನಿರ್ವಹಿಸುತ್ತೇನೆ ದೇಶದ ರಕ್ಷಣೆಯೆ ನಮ್ಮ ಮುಂದಿರುವ ಗುರಿ ಎಂದರು.