ಶನಿವಾರಸಂತೆ, ಮಾ. 23: ಬೋಧನೆ ಮಾಡಿ ಜೀವನದಲ್ಲಿ ಆಚರಣೆ ಮಾಡಿಕೊಂಡು ಬಂದ ಶ್ರೇಷ್ಠ ಮಾತುಗಳೇ ವಚನಗಳಾಗಿದ್ದು, ಶರಣರ ನುಡಿಮುತ್ತುಗಳು ಸಾರ್ವಕಾಲಿಕ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.
ಸಮೀಪದ ಕೊಡ್ಲಿಪೇಟೆ ಕಿರಿಕೊಡ್ಲಿ ಮಠದ ಗುರುಸಿದ್ಧ ಸ್ವಾಮಿ ವಿದ್ಯಾಪೀಠ ಸಭಾಂಗಣದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ ಹಾಗೂ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸಹಭಾಗಿತ್ವದಲ್ಲಿ ನಡೆದ ‘ವರ್ತಮಾನಕ್ಕೂ ವಚನ’ ಚಿಂತನಾಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಚನಗಳ ಸಾರವನ್ನು ಅರ್ಥಮಾಡಿಕೊಳ್ಳುವದು ಜೀವನದ ಅಂಗವಾಗಬೇಕು. ಸಂಸ್ಕಾರ, ಸಂಸ್ಕøತಿ ಮರೆಯಾಗುತ್ತಿದ್ದು, ಮಾನವನ ನಡವಳಿಕೆ ಬದಲಾಗುತ್ತಿದೆ. ಸುಸಂಸ್ಕøತರಾಗಲು ವಚನಗಳ ಅಧ್ಯಯನ ಮುಖ್ಯ ಎಂದರು.
ಮುದ್ದಿನಕಟ್ಟೆ ಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಶರಣರ ಜೀವನದ ಅನುಭವ ಸಾರವನ್ನೇ ವಚನಗಳಲ್ಲಿ ಕಾಣಬಹುದಾಗಿದ್ದು, ವಚನಗಳು ವಿಶ್ವಮಾನ್ಯತೆ ಪಡೆದಿವೆ. ಪ್ರತಿ ದಿನ ಪ್ರತಿಕ್ಷಣ ಅನ್ವಯವಾಗುವದೇ ವಚನ ಸಾಹಿತ್ಯದ ವಿಶೇಷತೆ ಎಂದರು.
ಮನೆಹಳ್ಳಿ ತಪೋವನ ಮಠದ ಮಹಾಂತ ಶಿವಲಿಂಗ ಸ್ವಾಮೀಜಿ ಮಾತನಾಡಿ, ಬಸವಾದಿ ಶರಣರ ಜೀವನದ ನಿಲುವುಗಳು, ಅವರ ವಚನಗಳು ಎಲ್ಲರ ಬದುಕಿಗೂ ಆದರ್ಶ. ಬಸವಣ್ಣನವರ ದೃಷ್ಟಿಯಲ್ಲಿ ಸತ್ಯ ನುಡಿಯುವದು ಹಾಗೂ ನುಡಿದಂತೆ ನಡೆಯುವದೇ ಪರಿಶುದ್ಧ ಜೀವನ ಎಂದರು.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಲೋಕೇಶ್ ಸಾಗರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಖಜಾಂಚಿ ಡಿ.ಬಿ. ಸೋಮಪ್ಪ- ಜಯಮ್ಮ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್. ಮಹೇಶ್ ವಹಿಸಿ ಮಾತನಾಡಿದರು. ಅಖಿಲ ಭಾರತ ವೀರಶೈವ ಮಹಾಸಭಾ ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ಹರೀಶ್ ಕುಮಾರ್, ಶರಣ ಸಾಹಿತ್ಯ ಪರಿಷತ್ ವೀರಾಜಪೇಟೆ ತಾಲೂಕು ಅಧ್ಯಕ್ಷ ಎಸ್.ಎಸ್. ಸುರೇಶ್, ಪ್ರಮುಖರಾದ ಸೋಮಪ್ಪ ಮಾಸ್ಟರ್, ಪ್ರೇಮನಾಥ್, ಅನುಚಂದ್ರಶೇಖರ್, ವಿದ್ಯಾಪೀಠದ ಪ್ರಾಂಶುಪಾಲರಾದ ತನುಜಾ, ಉಪನ್ಯಾಸಕ ಚಂದ್ರಶೇಖರ್ ಇತರರು ಉಪಸ್ಥಿತರಿದ್ದರು.