ಶನಿವಾರಸಂತೆ, ಮಾ. 23: ವಿಶ್ವದೆಲ್ಲೆಡೆ ಜಲದ ಅಭಾವ ಸೃಷ್ಟಿಯಾಗಿದ್ದು, ಮುಂದಿನ ಪೀಳಿಗೆಗೆ ನಾವು ಕೊಡಬಹುದಾದ ಅತ್ಯಮೂಲ್ಯ ಉಡುಗೊರೆ ಜಲ ಸಂರಕ್ಷಣೆಯಾಗಿದೆ ಎಂದು ಮಸ್ಜಿದುನ್ನೂರು ಮುಖ್ಯ ಗುರು ಮಹಮ್ಮದ್ ಫೈಝಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹ್ಯಾಂಡ್‍ಪೋಸ್ಟ್‍ನ ನೂರ್ ಯೂತ್ ಅಸೋಸಿಯೇಷನ್ ವತಿಯಿಂದ ತಜಲ್ಲಿಯಾತ್ ಅರಬೀಕ್ ಶಾಲೆಯ ಸಭಾಂಗಣದಲ್ಲಿ ವಿಶ್ವ ಜಲ ದಿನದ ಅಂಗವಾಗಿ ನಡೆದ ಜನ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೀರು ಅಮೂಲ್ಯವಾಗಿದ್ದು, ಅದನ್ನು ಪೋಲು ಮಾಡದೆ ಮಿತವಾಗಿ ಬಳಸಬೇಕು. ಮರಗಳನ್ನು ಕಡಿಯದೆ, ಬೆಟ್ಟ ಅಗಿಯದೆ, ನದಿಗಳನ್ನು ಸಂರಕ್ಷಿಸುವ ಮೂಲಕ ಜಲವನ್ನು ಕಾಪಾಡಬೇಕು. ಒಂದು ಹನಿ ನೀರು ಜೀವವನ್ನು ಕಾಪಾಡಬಲ್ಲುದು ಎಂದರು.

ಸಮಿತಿ ಕಾರ್ಯದರ್ಶಿ ಜಹೀರ್ ನಿಝಾಮಿ ಮಾತನಾಡಿ, ನೀರನ್ನು ಉಳಿಸಿ, ಬಳಸುವ ಬಗ್ಗೆ ಪ್ರತಿಜ್ಞೆ ಬೋಧಿಸಿದರು. ಮಸ್ಜಿದುನ್ನೂರ್ ಕಾರ್ಯದರ್ಶಿ ಮಹಮ್ಮದ್ ಹನೀಫ್ ವಿಶ್ವ ಜಲ ದಿನ ಹಾಗೂ ನೀರನ್ನು ಮಿತವಾಗಿ ಬಳಸುವ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಸ್ಜಿದುನ್ನೂರ್ ಅಧ್ಯಕ್ಷ ಡಿ.ಎ. ಸುಲೈಮಾನ್ ವಹಿಸಿ ಮಾತನಾಡಿದರು. ಹಿರಿಯ ಮುಖಂಡದಾರ ಅಬೂಬಕ್ಕರ್ ಹಾಜಿ, ಮಹಮ್ಮದ್ ಹಾಜಿ, ಉಸ್ಮಾನ್ ಹಾಜಿ, ಹೆಚ್.ಈ. ಸುಲೈಮಾನ್, ಅಬ್ದುಲ್ ಅಝೀಝ್, ಶಕೀರ್ ಬಾಖವಿ, ಮಜೀದ್ ಮುಸ್ಲಿಯಾರ್, ನೂರ್ ಯೂತ್ ಅಸೋಸಿಯೇಷನ್ ಅಧ್ಯಕ್ಷ ಬಾಸಿತ್ ಹಾಜಿ, ಕಾರ್ಯದರ್ಶಿ ಅಶ್ರಫ್, ಸಲಹೆಗಾರ ಸಿದ್ದೀಕ್ ಹಾಜಿ, ಮಸ್ಜಿದುನ್ನೂರ್ ಆಡಳಿತ ಮಂಡಳಿ ಸದಸ್ಯರು ಹಾಗೂ ಯೂತ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು.