ಕುಶಾಲನಗರ, ಮಾ. 23: ಕುಶಾಲನಗರ ಚುನಾವಣಾ ತಪಾಸಣಾ ಕೇಂದ್ರದಲ್ಲಿ ತಪಾಸಣೆ ಸಂದರ್ಭ ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಾಟ ಮಾಡುತ್ತಿದ್ದ ಅಪಾರ ಪ್ರಮಾಣದ ನಗದನ್ನು ಕೇಂದ್ರದ ಅಧಿಕಾರಿಗಳು ವಶಕ್ಕೆ ಪಡೆದು ಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮೈಸೂರಿನಿಂದ ಕುಶಾಲನಗರದ ಕಡೆಗೆ ತೆರಳುತ್ತಿದ್ದ ಇನ್ನೋವಾ ಕಾರನ್ನು (ಕೆಎ.35.ಎನ್.1254) ಪರಿ ಶೀಲಿಸಿದ ಸಂದರ್ಭ ಕಾರಿನೊಳಗೆ ದಾಖಲೆಯಿಲ್ಲದ 1.97 ಲಕ್ಷ ರೂ. ಗಳು ಪತ್ತೆಯಾಗಿದೆ. ಕಾರಿನಲ್ಲಿದ್ದ ತುಮಕೂರಿನ ಚಂದ್ರಶೇಖರ್, ಕದಂಬ ಮತ್ತು ಅರುಣ್ ಎಂಬವ ರನ್ನು ವಿಚಾರಿಸಿದ ಸಂದರ್ಭ ಸಮರ್ಪಕ ದಾಖಲೆ ಒದಗಿಸದ ಹಿನ್ನೆಲೆಯಲ್ಲಿ ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ಹಣವನ್ನು ಖಜಾನೆಗೆ ಹಸ್ತಾಂತರಿಸಲಾಗಿದೆ. ಸ್ಥಳಕ್ಕೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ಭೇಟಿ ನೀಡಿ ಮಹಜರು ನಡೆಸಿ ಬಂಧಿತರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.ತಪಾಸಣಾ ಕೇಂದ್ರದ ಅಧಿಕಾರಿ ರಘು, ರವಿಕುಮಾರ್, ಶಿವಣ್ಣ, ಪೊಲೀಸ್ ಇಲಾಖೆಯ ಜಯಪ್ರಕಾಶ್ ಕಾರ್ಯಾಚರಣೆ ನಡೆಸಿದರು.