ಗೋಣಿಕೊಪ್ಪ ವರದಿ, ಮಾ. 23: ಹಾಕಿಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಕಿಕೂರ್ಗ್ ಆಯೋಜಿಸಲಿರುವ ಕೂರ್ಗ್ ಹಾಕಿ ಚಾಂಪಿಯನ್‍ಶಿಪ್ ಹಾಗೂ ಚಾಂಪಿಯನ್ಸ್ ಲೀಗ್ ಟ್ರೋಫಿಯಲ್ಲಿ ಪಾಲ್ಗೊಳ್ಳಲಿರುವ ಕೊಡವ ಕುಟುಂಬಗಳಿಗೆ ಕೊಡವ ಹಾಕಿ ಅಕಾಡೆಮಿಯಿಂದ ನಿರ್ಬಂಧ ಹೇರದೆ ಮುಕ್ತ ಅವಕಾಶ ನೀಡುವ ನಿರ್ಧಾರವನ್ನು ಕೊಡವ ಹಾಕಿ ಅಕಾಡೆಮಿ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.ಕೊಡವ ಸಮಾಜ ಸಭಾಂಗಣದಲ್ಲಿ ಕೊಡವ ಹಾಕಿ ಅಕಾಡೆಮಿ ಕಾರ್ಯಧ್ಯಕ್ಷ ಕಾಳೇಂಗಡ ರಮೇಶ್ ಕಾರ್ಯಪ್ಪ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಮಹಾಸಭೆಯಲ್ಲಿ ಕೊಡವ ಹಾಕಿ ಟೂರ್ನಿಯಲ್ಲಿ ಆಟಗಾರರು ಪಾಲ್ಗೊಳ್ಳಲಿರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಹಾಕಿಕೂರ್ಗ್ ಆಯೋಜಿಸಿರುವ ಟೂರ್ನಿಯಲ್ಲಿ ಪಾಲ್ಗೊಳ್ಳುವ ಆಟಗಾರರು ಅಥವಾ ಕುಟುಂಬಗಳಿಗೆ ನಿರ್ಬಂಧ ಹೇರಬಾರದು, ಕೊಡವ ಹಾಕಿ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. ಇದರಂತೆ ಈ ಬಾರಿ ಹಾಕಿ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿರುವ ಕುಟುಂಬಕ್ಕೆ ಮುಕ್ತವಾಗಿ ಪಾಲ್ಗೊಳ್ಳಲು ಅವಕಾಶ ನೀಡುವದಾಗಿ ಮಹಾಸಭೆಯಲ್ಲಿ ಘೋಷಿಸಲಾಯಿತು.ಕಾರ್ಯಾಧ್ಯಕ್ಷ ಕಾಳೇಂಗಡ ರಮೇಶ್ ಕಾರ್ಯಪ್ಪ ಮಾತನಾಡಿ, ಕೊಡವ ಹಾಕಿ ನಮ್ಮೆ ನಡೆಸುವ ಕೊಡವ ಹಾಕಿ ಅಕಾಡೆಮಿಯ ಹಕ್ಕನ್ನು ಕೊಡವ ಹಾಕಿ ಅಕಾಡೆಮಿ ಮಾತ್ರ ಕಾಯ್ದಿರಿಸಿಕೊಂಡಿದೆ. ಹಾಕಿ ನಮ್ಮೆಯ ಹೊರತು ನಡೆಸುವ ಟೂರ್ನಿಗೆ ವಿರೋಧಿಸದಂತೆ ಈಗಾಗಲೇ ಹಾಕಿಕೂರ್ಗ್ ಪದಾಧಿಕಾರಿ ಗಳೊಂದಿಗೆ ನಡೆಸಿದ ಜಂಟಿ ಸಭೆಯಲ್ಲಿ ನಿರ್ಧರಿಸಲಾಗಿದೆ. ಸದಸ್ಯರ ಒತ್ತಾಯದಂತೆ ಎಲ್ಲಾ ಕೊಡವ ಆಟಗಾರರು ಹಾಗೂ ಕುಟುಂಬ ತಂಡಗಳು ಮುಕ್ತವಾಗಿ ಪಾಲ್ಗೊಳ್ಳ ಬಹುದಾಗಿದೆ. ಇದಕ್ಕೆ ಕೊಡವ ಹಾಕಿ ಅಕಾಡೆಮಿ ವಿರೋಧ ವ್ಯಕ್ತಪಡಿಸುವದಿಲ್ಲ ಎಂದರು.

ಕೊಡಗಿನಲ್ಲಿ ನಡೆದ ಭೂಕುಸಿತ ಸಂದರ್ಭ ಕೊಡಗು ಸೂತಕದಲ್ಲಿತ್ತು. ಈ ಸಂದರ್ಭ ಈ ಬಾರಿ ಹಾಕಿ ನಮ್ಮೆ ನಡೆಸಬೇಕಿದ್ದ ಹರಿಹರ ಮುಕ್ಕಾಟೀರ ಕುಟುಂಬದ ಪ್ರಮುಖರೊಂದಿಗೆ ಸಭೆ ನಡೆಸಿ ಒಂದಾಗಿ ನಾವು ಕೊಡವ ಹಾಕಿ ನಮ್ಮೆಯನ್ನು ಈ ವರ್ಷದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಎಲ್ಲರ ಸಹಕಾರ ಬೇಕು ಎಂದರು.

ಕಳ್ಳಿಚಂಡ ಗೌತಂ, ಸಣ್ಣುವಂಡ ಲೋಕೇಶ್, ಕೊಡವ ಹಾಕಿ ನಮ್ಮೆಯನ್ನು ಸ್ಥಗಿತಗೊಳಿಸಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಹಾಕಿ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಬೇರೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿರುವ ತಂಡಗಳಲ್ಲಿ ಗೊಂದಲವಿದೆ. ಹಾಕಿ ಅಭಿಮಾನಿಗಳು ಹಾಕಿ ಟೂರ್ನಿಯಲ್ಲಿ ಪಾಲ್ಗೊಳ್ಳಲು ಉತ್ಸುಕರಾಗಿದ್ದಾರೆ. ಇದರಿಂದಾಗಿ ಹಾಕಿಕೂರ್ಗ್ ಸಂಸ್ಥೆ ನಡೆಸುವ ಟೂರ್ನಿಗೆ ವಿರೋಧ ವ್ಯಕ್ತಪಡಿಸಬಾರದು ಎಂದರು.

ಚೆಪ್ಪುಡೀರ ಕಾರ್ಯಪ್ಪ ಮಾತನಾಡಿ, ಹಾಕಿಯನ್ನು ಪ್ರೋತ್ಸಾಹಿಸಲು ಅಕಾಡೆಮಿ ಹೋಬಳಿ ಮಟ್ಟದಲ್ಲಿ ತರಬೇತಿ ನೀಡಬೇಕು. ಸ್ಥಳೀಯವಾಗಿ ತರಬೇತಿ ದೊರೆಯುವಾಗ ಹೆಚ್ಚು ಪ್ರತಿಭೆಗಳಿಗೆ ಪ್ರೋತ್ಸಾಹ ದೊರೆತಂತಾಗುತ್ತದೆ ಎಂದರು.

(ಮೊದಲ ಪುಟದಿಂದ) ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಕೊಡವ ಹಾಕಿ ಆತಿಥ್ಯ ವಹಿಸುವ ಕುಟುಂಬಗಳಿಗೆ ಕನಿಷ್ಟ 5 ವರ್ಷಗಳ ಮುನ್ನ ಮಾಹಿತಿ ನೀಡುವಂತಾಗಬೇಕು. ಇದರಿಂದ ಆರ್ಥಿಕವಾಗಿ ಹಾಗೂ ಮೈದಾನ ಸಿದ್ದತೆ, ನಮ್ಮೆ ನಡೆಸುವ ಸ್ಥಳ ನಿಗಧಿ ಸೇರಿದಂತೆ ಪೂರ್ವಸಿದ್ಧತೆಗೆ ಅವಕಾಶ ಸಿಗುತ್ತದೆ ಎಂದರು.

ಮುಂದಿನ ವರ್ಷ ಹರಿಹರ ಮುಕ್ಕಾಟೀರ ಕುಟುಂಬದಿಂದ ಕೊಡವ ಹಾಕಿ ನಮ್ಮೆ ನಡೆಯಲಿದೆ. ನಂತರದ ವರ್ಷದಲ್ಲಿ ಆದೇಂಗಡ ಕುಟುಂಬ ನಮ್ಮೆ ಆತಿಥ್ಯ ವಹಿಸಲಿದೆ ಎಂದು ಕಾರ್ಯದರ್ಶಿ ರವಿ ಉತ್ತಪ್ಪ ಸ್ಪóಷ್ಟಪಡಿಸಿದರು.

ಅಕಾಡೆಮಿಯ ಉಪಾಧ್ಯಕ್ಷರುಗಳಾದ ಮುಕ್ಕಾಟೀರ ಕ್ಯಾಟಿ ಉತ್ತಪ್ಪ, ಕಲಿಯಂಡ ನಾಣಯ್ಯ, ಮಂಡೇಪಂಡ ಕುಟ್ಟಣ್ಣ, ಕಾರ್ಯದರ್ಶಿ ಮಾರ್ಚಂಡ ಗಣೇಶ್, ನಿರ್ದೇಶಕರುಗಳಾದ ಮೇಕೇರಿರ ರವಿ ಪೆಮ್ಮಯ್ಯ, ಕುಲ್ಲೇಟೀರ ಚಿಪ್ಪಿ ಕಾರ್ಯಪ್ಪ, ಸಲಹೆಗಾರ ಮಾದಂಡ ಪೂವಯ್ಯ ಉಪಸ್ಥಿತರಿದ್ದರು.

- ಸುದ್ದಿಪುತ್ರ