ಸೋಮವಾರಪೇಟೆ,ಮಾ.23: ಇದುವರೆಗೂ ಕಾಡಾನೆಗಳ ಕಾಟದಿಂದ ಸಂಕಷ್ಟದ ಬದುಕು ಸಾಗಿಸುತ್ತಿದ್ದ ತಾಲೂಕಿನ ಕೂತಿ ಗ್ರಾಮದ ಕೃಷಿಕರಿಗೆ ಇದೀಗ ನವಿಲುಗಳ ಕಾಟ ಹೊಸ ತಲೆನೋವಾಗಿ ಪರಿಣಮಿಸಿದೆ.ಗದ್ದೆಗಳಲ್ಲಿ ಬೆಳೆಯಲಾಗುತ್ತಿರುವ ಹಸಿಮೆಣಸು, ಬೀನ್ಸ್ ಸೇರಿದಂತೆ ಇತರ ಕೃಷಿ ಬೆಳೆಗಳನ್ನು ನವಿಲುಗಳು ತಿಂದು ನಷ್ಟಪಡಿಸುತ್ತಿದ್ದು, ರಾಷ್ಟ್ರಪಕ್ಷಿಯ ಕಾಟಕ್ಕೆ ಕೃಷಿಕರು ಹೈರಾಣಾಗಿದ್ದಾರೆ. ಕಳೆದ ಕೆಲ ವರ್ಷಗಳಿಂದ ಕೂತಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳು ಲಗ್ಗೆಯಿಟ್ಟು ಕಾಫಿ, ಬಾಳೆ ಸೇರಿದಂತೆ ಇನ್ನಿತರ ಕೃಷಿಯನ್ನು ನಾಶಪಡಿಸುತ್ತಿದ್ದವು.ಹಲವಷ್ಟು ಬಾರಿ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟಿದರೂ ಸಹ ಮತ್ತೆ ಮತ್ತೆ ಜನವಸತಿ, ಕೃಷಿ ಪ್ರದೇಶಕ್ಕೆ ಧಾಳಿಯಿಟ್ಟು, ನಷ್ಟ ಪಡಿಸುತ್ತಲೇ ಇದ್ದವು. ಈ ಮಧ್ಯೆ ಇದೀಗ ನವಿಲುಗಳ ಹಾವಳಿ ಈ ವ್ಯಾಪ್ತಿಯಲ್ಲಿ ಮಿತಿಮೀರಿದ್ದು, ಕೃಷಿಕರು ಹೊಸ ಸಮಸ್ಯೆಗೆ ಸಿಲುಕಿದ್ದಾರೆ.ಕೂತಿ ಗ್ರಾಮದ ಸುಮಾರು 50 ಏಕರೆಗೂ ಅಧಿಕ ಪ್ರದೇಶದ ಗದ್ದೆಯಲ್ಲಿ ಹಸಿಮೆಣಸು, ಬೀನ್ಸ್, ವಿವಿಧ ತರಕಾರಿಗಳನ್ನು ಬೆಳೆಯಲಾಗುತ್ತಿದ್ದು, ಇವುಗಳ ಚಿಗುರು, ಎಲೆಗಳನ್ನು ನವಿಲುಗಳು ತಿಂದು ನಾಶಪಡಿಸುತ್ತಿವೆ ಎಂದು ಕೂತಿ ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.

ಭತ್ತದರಾಶಿ ಬೆಟ್ಟದ ಕೆಳಭಾಗದ ಗದ್ದೆಗಳು ಹೆಚ್ಚಾಗಿ ನವಿಲುಗಳ ಕಾಟಕ್ಕೆ ತುತ್ತಾಗುತ್ತಿವೆ. ಹೊಸೂರು, ಕೌಕೋಡಿ, ಚಿಕ್ಕತೋಳೂರು ಭಾಗಗಳಿಂದ ಸುಮಾರು 20ಕ್ಕೂ ಅಧಿಕ ನವಿಲುಗಳು ಕೂತಿ ವ್ಯಾಪ್ತಿಗೆ ಆಗಮಿಸಿದ್ದು, ಕೃಷಿ ಬೆಳೆಗಳನ್ನು ನಷ್ಟಗೊಳಿಸುತ್ತಿವೆ. ಇವುಗಳಿಂದ ಮುಕ್ತಿ ಪಡೆಯುವದು ಹೇಗೆ ಎಂಬ ಬಗ್ಗೆ ಚಿಂತೆ ಮೂಡಿದೆ ಎಂದು ಕೃಷಿಕರು ಅಳಲು ತೋಡಿಕೊಂಡಿದ್ದಾರೆ.

-ವಿಜಯ್