ಗೋಣಿಕೊಪ್ಪ ವರದಿ, ಮಾ. 22: ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಪ್ರತಿಭೆಗೆ ವೇದಿಕೆ ನೀಡಿದ ಹಳ್ಳಿಗಟ್ಟು ಕೂರ್ಗ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ಕಾಲೇಜಿನಲ್ಲಿ ರಾಜ್ಯಮಟ್ಟದ ‘ಅನ್ವೇಷಣೆ-19’ ಮಾದರಿ ಪ್ರಯೋಗ ಸ್ಪರ್ಧೆಭವಿಷ್ಯದ ಭಾರತ ನಿರ್ಮಾಣ ಕನಸನ್ನು ಅನಾವರಣಗೊಳಿಸಿತು.

ಸುಮಾರು 80 ಕ್ಕೂ ಹೆಚ್ಚು ಸ್ಪರ್ಧಿಗಳು ಪಾಲ್ಗೊಂಡಿದ್ದ ಸ್ಪರ್ಧೆಯಲ್ಲಿ ನಾನಾ ಅವಿಷ್ಕಾರಗಳು ಜನರಿಗೆ ತಂತ್ರಜ್ಞಾನ ಹೆಚ್ಚು ಸಹಕಾರಿ ಎಂಬದನ್ನು ಹೊರಸೂಸಿತು. ಸಿವಿಲ್ ಇಂಜಿನಿಯರ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್, ಕಂಪ್ಯೂಟರ್ ಸೈನ್ಸ್ ಮತ್ತು ಇಂಜಿನಿಯರಿಂಗ್ ಹಾಗೂ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಸ್ಪರ್ಧೆ ನಡೆಯಿತು. ರಾಜ್ಯದ ವಿವಿಧ ಭಾಗದ ಪಾಲಿಟೆಕ್ನಿಕ್ ಕಾಲೇಜಿನ ಸುಮಾರು 400 ವಿದ್ಯಾರ್ಥಿಗಳು ತಮ್ಮದೇ ಆದ ಚಿಂತನೆಯಲ್ಲಿ ವಿಜ್ಞಾನದ ಅವಿಷ್ಕಾರ ನೀಡಿದರು. ಮೊಬೈಲ್ ತಂತ್ರಜ್ಞಾನದ ಮೂಲಕ ಮನೆ ನಿರ್ವಹಣೆ, ವಾಹನ ಚಾಲನೆ, ಯಾಂತ್ರಿಕೃತ ನಿರ್ವಹಣೆ ಬಗ್ಗೆ ಹೆಚ್ಚು ಅನ್ವೇಷಣೆಗಳು ಅನಾವರಣಗೊಂಡವು. ಪ್ರತೀ ಮಾದರಿಗೆ ಮೊಬೈಲ್ ತಂತ್ರಜ್ಞಾನ, ಇಂಟರ್‍ನೆಟ್ ಬಳಕೆ ಬಗ್ಗೆ ಉತ್ಸುಕತೆ ಹೆಚ್ಚಾಗಿತ್ತು.

ಯುವ ಅವಿಷ್ಕಾರದ ತುಣುಕುಗಳು

ಉಜಿರೆ ಎಸ್‍ಡಿಎಂ ಕಾಲೇಜು ತಂಡ ಮೆಕಾನಿಕಲ್ ವಿಭಾಗದ ಮೂಲಕ ತೆಂಗಿನಕಾಯಿ ಸುಲಿಯುವ ಯಂತ್ರದ ಮಾದರಿ ನೀಡಿತು. ಗಂಟೆಗೆ ಸುಮಾರು 260 ತೆಂಗಿನ ಕಾಯಿ ಸುಲಿಯುವ ಮಾದರಿ ಹೆಚ್ಚು ಗಮನ ಸೆಳೆಯಿತು. 3-5 ಸೆಕೆಂಡ್‍ಗೆ 1 ತೆಂಗಿನಕಾಯಿ ಸುಲಿಯುವ ಯಂತ್ರದ ಸಾಮಥ್ರ್ಯ ಅನಾವರಣಗೊಂಡಿತು.

ಗೋಣಿಕೊಪ್ಪ ಕಾವೇರಿ ಪಾಲಿಟೆಕ್ನಿಕ್ ಕಾಲೇಜಿನ ಸಿಎನ್‍ಸಿ ಮಿಲ್ಲಿಂಗ್ ಯಂತ್ರದ ಮೂಲಕ ಪದಗಳ ಜೋಡಣೆ, ನಿರ್ವಹಣೆ ಬಗ್ಗೆ ತಂತ್ರಜ್ಞಾನ ನೀಡಿತು. ಉಜಿರೆ ಎಸ್‍ಡಿಎಂ ಕಾಲೇಜು ತಂಡ ಪ್ಲಾಸ್ಟಿಕ್ ಕಸದ ಮೂಲಕ ಇಂಟರ್‍ಲಾಕ್ ನಿರ್ಮಾಣದ ಬಗ್ಗೆ ಮಾದರಿ ಪ್ರದರ್ಶಿಸಿ ಕಸದಿಂದಲೂ ಸಂಪನ್ಮೂಲ ಸಂಗ್ರಹಿಸುವ ಬಗ್ಗೆ ತಿಳಿಸಿದರು. ಹೆಚ್ಚು ಉತ್ಪಾದನ ವೆಚ್ಚವಿಲ್ಲದೆ ಹೆಚ್ಚು ಲಾಭ ಪಡೆಯುವ ಯೋಜನೆ ಬಗ್ಗೆ ಮಾಹಿತಿ ನೀಡಿದರು. ಉಳಿದಂತೆ ಅಡಿಕೆ ಸುಲಿಯುವ ಯಂತ್ರ, ಬಯೋಗ್ಯಾಸ್ ತಂತ್ರಜ್ಞಾನ ಹೆಚ್ಚು ಗಮನ ಸೆಳೆಯಿತು.

ಲೈನ್‍ಮನ್ ಉದ್ಯೋಗಿಗಳ ಕೊರತೆ ನೀಗಿಸಲು ಹಾಗೂ ಲೈನ್ ಸಮಸ್ಯೆ ಪತ್ತೆಹಚ್ಚಲು ಮೊಬೈಲ್ ತಂತ್ರಜ್ಞಾನದ ಮೂಲಕ ಸುಲಭ ವಿಧಾನವನ್ನು ಆಟೋಮೇಟಿಕ್ ಜಂಪರ್ ಸಿಸ್ಟಮ್‍ನ್ನು ಸುಳ್ಯ ಕುರುಂಜಿ ವೆಂಕಟರಮಣ ಗೌಡ ಕಾಲೇಜಿನ ತಂಡ ಅನಾವರಣಗೊಳಿಸುವ ಮೂಲಕ ಗಮನ ಸೆಳೆಯಿತು. ಮಾನವ ಚಾಲಿತ ಹೊರತು ಒಬ್ಬ ಉದ್ಯೋಗಿಯಿಂದ ವಿದ್ಯುತ್‍ಲೈನ್ ನಿರ್ವಹಣೆ ಬಗ್ಗೆ ತಂತ್ರಜ್ಞಾನ ಹೊರ ಹಾಕುವ ಮೂಲಕ ಮಾದರಿಯಾಯಿತು.

ಮುರುಡೇಶ್ವರ ಆರ್‍ಎನ್ ಎಲೆಕ್ಟ್ರಾನಿಕ್ಸ್ ತಂಡದ ಆರ್‍ಡಿಎಕ್ಸ್ ಬಾಂಬ್ ನಿಷ್ಕ್ರೀಯ ಯಂತ್ರ ಹೆಚ್ಚು ಗಮನ ಸೆಳೆಯುವಂತೆ ಮಾಡಿತು. ಮಣ್ಣಿನಲ್ಲಿರುವ ಹಾನಿಕಾರಕ ವಸ್ತುಗಳನ್ನು ನಿಷ್ಕ್ರೀಯಗೊಳಿಸುವ ಸಾಮಥ್ರ್ಯ ಹೊಂದಿರುವ ತಂತ್ರಜ್ಞಾನ ಅನಾವರಣಗೊಂಡಿತು. ಧಾರವಾಡ ಕೆಹೆಚ್‍ಕೆ ಪಾಲಿಟೆಕ್ನಿಕ್ ತಂಡ ಅಟೋಮೆಟಿಕ್ ಪೆಟ್ರೋಲ್ ಬಂಕ್ ನಿರ್ವಹಣೆ ಬಗ್ಗೆ ತಂತ್ರಜ್ಞಾನ ನೀಡಿತು ಕೇವಲ ಒಬ್ಬ ಉದ್ಯೋಗಿಯಿಂದ ಯಾಂತ್ರೀಕೃತವಾಗಿ ಪೆಟ್ರೋಲ್ ಖರೀದಿ ಮೂಲಕ ನಿರ್ವಹಣೆ ವೆಚ್ಚ ತಗ್ಗಿಸುವ ಮೂಲಕ ಹೆಚ್ಚು ಲಾಭ ಪಡೆಯುವ ಬಗ್ಗೆ ತಂತ್ರಗಾರಿಕೆ ನೀಡಿದರು.

ವಿಶೇಷಚೇತನರ ಚೇತನಗಳು

ಮೈಸೂರು ಜೆಎಸ್‍ಎಸ್ ವಿಶೇಷಚೇತನ ಕಾಲೇಜು ತಂಡದ ವಿಶೇಷಚೇತನರುಗಳಾದ ಶರತ್‍ಕುಮಾರ್, ರಕ್ಷಿತಾರಾಜ್, ಮುರುಳಿಧರ್, ಮಿಥುನ್ ಬರಿಗಿದಾದ್, ಜಿ.ಆರ್. ಹೇಮಾ. ಪುಟ್ಟಪ್ಪ, ಸರಸ್ವತಿ, ಪ್ರವೀಣ್ ತಂತ್ರಜ್ಞಾನ ತಮ್ಮದೇ ಚಿಂತನೆಯಲ್ಲಿ ತಂತ್ರಗಾರಿಕೆಯ ಅನಾವರಣ ಗೊಳಿಸಿದರು. ಮೊಬೈಲ್ ಮೂಲಕವೇ ಬದುಕು ಸಾಗಿಸುವ ಬಗೆ ಹೆಚ್ಚು ಗಮನ ಸೆಳೆಯಿತು. ಯಾಂತ್ರಿಕೃತ ಬಾಗಿಲು ಚಾಲನೆ ಯಂತ್ರ ಹಾಗೂ ಸ್ಮಾರ್ಟ್ ಜಾಕೆಟ್ ತಂತ್ರಜ್ಞಾನ, ಸೈನ್ ಲ್ಯಾಂಗ್ವೇಜ್ ಮತ್ತು ಬ್ಲೂಟೂತ್ ಮೂಲಕ ಮನೆ ನಿರ್ವಹಣೆ ತಂತ್ರಜ್ಞಾನ ಉತ್ಸಾಹ ಮೂಡಿಸಿತು.

- ಸುದ್ದಿಪುತ್ರ