ಮಡಿಕೇರಿ, ಮಾ. 22: ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆ ಬಲಪಡಿಸುವ ನಿಟ್ಟಿನಲ್ಲಿ ಕಾಲಮಿತಿಯೊಳಗೆ ಸಮಿತಿ ರಚನೆ ಮಾಡುವಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ಮಾಡಿದ್ದಾರೆ.

ಜಿಲ್ಲೆಯಲ್ಲಿ ವಿಪತ್ತು ನಿರ್ವಹಣಾ ಯೋಜನೆ ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಪತ್ತು ಎದುರಿಸಲು ಅಗತ್ಯ ಪೂರ್ವ ತಯಾರಿ ಮಾಡಿಕೊಳ್ಳಬೇಕು. ಅಪಾಯದ ಪ್ರದೇಶಗಳಲ್ಲಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸ್ಥಳಾಂತರ ಮಾಡಲು ಬೋಟ್‍ಗಳ ವ್ಯವಸ್ಥೆ, ವಾಹನ ಕಲ್ಪಿಸುವದು, ದೂರವಾಣಿ ಸಂಪರ್ಕ ಮತ್ತಿತರವನ್ನು ಮೊದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪಿ. ವಿಪತ್ತು ನಿರ್ವಹಣೆ ಸಂಬಂಧಿಸಿದಂತೆ ತಕ್ಷಣ ಕೈಗೊಳ್ಳಬೇಕಾದ ಕ್ರಮಗಳು ಮತ್ತು ದೂರದೃಷ್ಟಿಯ ಕಾರ್ಯಕ್ರಮ ರೂಪಿಸುವ ಬಗ್ಗೆ ಅಗತ್ಯ ಕ್ರಮವಹಿಸಬೇಕಿದೆ ಎಂದರು.

ಜಿ.ಪಂ. ಸಿಇಓ ಕೆ. ಲಕ್ಷ್ಮಿಪ್ರಿಯಾ ಪ್ರಕೃತಿ ವಿಕೋಪ ಸಂದರ್ಭದಲ್ಲಿ ಆರೋಗ್ಯ ಸೌಲಭ್ಯ ಕಲ್ಪಿಸುವದು, ಮಾನಸಿಕ ಧೈರ್ಯ ತುಂಬುವ ಕಾರ್ಯಕ್ರಮಗಳನ್ನು ಕೈಗೊಳ್ಳುವದು ಅಗತ್ಯ ಎಂದರು.

ಗ್ರಾಮ ಮಟ್ಟದಲ್ಲಿ ಈಗಾಗಲೇ ಸಮಗ್ರ ಕೊಡಗು ಸ್ಪಂದನಾ ಯೋಜನೆ ಮುಖಾಂತರ ಸಭೆ ನಡೆಸಲಾಗಿದ್ದು, ಮುಂದಿನ ಮಳೆಗಾಲದಲ್ಲಿ ಸಿದ್ಧತೆ ಮಾಡಿಕೊಳ್ಳುವ ಬಗ್ಗೆ ಚರ್ಚಿಸಲಾಗಿದ್ದು, ಸಾರ್ವಜನಿಕರ ಅಭಿಪ್ರಾಯಗಳನ್ನು ಈ ಯೋಜನೆಯಲ್ಲಿ ಸೇರ್ಪಡೆ ಮಾಡಬೇಕಿದೆ ಎಂದು ಯುನೆಸೆಫ್ ಪ್ರತಿನಿಧಿಗಳು ತಿಳಿಸಿದರು.

ಸಾರ್ವಜನಿಕರ ಅಭಿಪ್ರಾಯದಂತೆ ಯುನೆಸೆಫ್ ಸಹಕಾರ ಪಡೆದು ತುರ್ತು ಪರಿಸ್ಥಿತಿಯಲ್ಲಿ ಕೈಗೊಳ್ಳಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ತ್ವರಿತ ಕ್ರಮ ಕೈಗೊಳ್ಳುವದು, ಜನ-ಜಾನುವಾರು ರಕ್ಷಣೆ, ಪರಿಹಾರ ಕೇಂದ್ರಗಳು, ಗೋಶಾಲೆ ಆರಂಭ, ಶುಚಿತ್ವ, ಆರೋಗ್ಯ, ಪೌಷ್ಟಿಕ ಆಹಾರ, ಪುನಃಶ್ಚೇತನ ಕಾರ್ಯಕ್ರಮಗಳು ಹೀಗೆ ಹಲವು ಸಮಿತಿಗಳನ್ನು ಜಿಲ್ಲಾ ಹಾಗೂ ತಾಲೂಕು, ಗ್ರಾಮ ಮಟ್ಟದಲ್ಲಿ ಸ್ಥಳೀಯ ರನ್ನು ಒಳಗೊಂಡ ತಂಡಗಳನ್ನು ರಚಿಸಲು ತೀರ್ಮಾನಿಸಲಾಯಿತು.

ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಯೋಗೇಶ್, ಯನೆಸೆಫ್ ಪ್ರತಿನಿಧಿಗಳಾದ ವೆಂಕಟೇಶ್ ಅರಳೀಕಟ್ಟಿ, ಡಾ. ನವೀನ್, ಡಾ. ಪರಮೇಶ್, ಫಿಲೀಪ್ ಲೋಬೋ, ಚಂದ್ರ ನಾಯಕ್, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ವಿಪತ್ತು ನಿರ್ವಹಣಾ ವಿಭಾಗದ ಲೆನಿನ್ ಬಾಬು, ಡಾ. ಶಿವು ಮತ್ತು ಮಣಿ, ಡಾ. ಇಮ್ತಿಯಾಜ್, ಡಾ. ಜಮೀರ್, ಜಿಲ್ಲಾ ಸಮಾಲೋಚಕ ಪ್ರಭಾತ್ ಎಂ. ಕಲ್ಕುರ, ಮನೋಹರ್, ಇತರರು ಹಲವು ಮಾಹಿತಿ ನೀಡಿದರು.