ಸುಂಟಿಕೊಪ್ಪ, ಮಾ. 21: ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀಮುತ್ತಪ್ಪ ದೇವಸ್ಥಾನ ಸಮಿತಿ ವತಿಯಿಂದ ಮುತ್ತಪ್ಪ ದೇವರ ವೆಳ್ಳಾಟಂ ಅಂಗವಾಗಿ ಬೆಳಿಗ್ಗೆಯಿಂದಲೇ ವಿವಿಧ ಪೂಜಾ ಕೈಂಕರ್ಯಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಯಿತು. ಶ್ರೀ ಚಾಮುಂಡೇಶ್ವರಿ ಮತ್ತು ಶ್ರೀ ಮುತ್ತಪ್ಪ ದೇವಸ್ಥಾನದ ಮುತ್ತಪ್ಪ ತೆರೆಯ ಹಿನ್ನೆಲೆ ದೇವಸ್ಥಾನಗಳನ್ನು ವಿದ್ಯುತ್ ದೀಪ ಹಾಗೂ ತಳಿರು ತೋರಣಗಳಿಂದÀ ಅಲಂಕರಿಸಲಾಗಿತ್ತು. ಬೆಳಿಗ್ಗೆ ಚಾಮುಂಡೇಶ್ವರಿ ದೇವಸ್ಥಾನದ ಮುಖ್ಯ ಅರ್ಚಕ ಮಂಜುನಾಥ್ ಉಡುಪ ಮತ್ತು ಗಣೇಶ ಶರ್ಮಾ ಅವರ ನೇತೃತ್ವದಲ್ಲಿ ಗಣಪತಿ ಹೋಮ, ಪೂರ್ಣ ಕುಂಭ ಕಲಶ, ಶುದ್ಧಿ ಪುಣ್ಯಾಹ, ಸತ್ಯನಾರಾಯಣ ಪೂಜೆ ನಡೆಯಿತು. ಸಂಜೆ ಮುತ್ತಪ್ಪ ದೇವರ ಮಲೆ ಇಳಿಸುವಿಕೆ ಹಾಗೂ ವಿವಿಧ ಪೂಜೆಗಳು ನಡೆದು ನಂತರ ರಾತ್ರಿ 10.30 ರವರೆಗೆ ಮುತ್ತಪ್ಪ ದೇವರ ವೆಳ್ಳಾಟಂ ನಡೆಯಿತು. ದೇವರ ತೆರೆಯನ್ನು ವೀಕ್ಷಿಸಲು ಸುತ್ತಮುತ್ತಲಿನ ಗ್ರಾಮದ ಭಕ್ತರು ಆಗಮಿಸಿದ್ದರು. ನಂತರ ಸಿಡಿಮದ್ದು ಪ್ರದರ್ಶನ, ಮಹಾಪೂಜೆ, ಮಂಗಳಾರತಿ ಪ್ರಸಾದ ವಿನಿಯೋಗ ನಡೆಯಿತು. ಈ ಸಂದರ್ಭ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಆರ್. ಸುಕುಮಾರ್, ಕಾರ್ಯದರ್ಶಿ ಸುರೇಶ್ ಗೋಪಿ, ಪದಾಧಿಕಾರಿಗಳಾದ ಧನು ಕಾವೇರಪ್ಪ, ಪಿ.ಕೆ. ಅನಿಲ್‍ಕುಮಾರ್, ವಿ.ಎ. ಸಂತೋಷ್ ಮತ್ತಿತರರು ಇದ್ದರು.