ಕುಶಾಲನಗರ, ಮಾ. 22: ಇಲ್ಲಿಗೆ ಸಮೀಪದ ಮಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನ ಕಾವೇರಿ ಸ್ನಾತಕೋತ್ತರ ಕೇಂದ್ರದ ಸಮಾಜ ಕಾರ್ಯ ಅಧ್ಯಯನ ವಿಭಾಗದಲ್ಲಿ ವಿಶ್ವ ಸಮಾಜ ಕಾರ್ಯ ದಿನವನ್ನು ಆಚರಿಸಲಾಯಿತು. ವೀರಾಜಪೇಟೆಯ ಕೊಡಗು ದಂತ ಮಹಾ ವಿದ್ಯಾಲಯದ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥರಾದ ಡಾ. ಜತೀಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶುಭ ಹಾರೈಸಿದರು. ಮಣಿಪಾಲ ವಿಶ್ವ ವಿದ್ಯಾನಿಲಯದ ಕುಲ ಸಚಿವ ಡಾ. ಮಧುಕರ್ ಮಲ್ಯ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಸಮಾಜದ ಏಳಿಗೆಗೆ ಪ್ರತಿಯೊಬ್ಬರು ಭಾಗವಹಿಸಬೇಕು ಎಂದು ಹೇಳಿ ಈ ಕಾರ್ಯಕ್ರಮದ ಭಾಗವಾಗಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾÐನ ಕಾವೇರಿ ಸ್ನಾತಕೋತ್ತರ ಕೇಂದ್ರದ ನಿರ್ದೇಶಕರಾದ ಪ್ರೊ. ಮಂಜುಳಾ ಶಾಂತರಾಮ್ “ದಾನ ಅಥವಾ ಇನ್ನಾವುದೆ ಉಚಿತ ಸೌಲಭ್ಯಗಳನ್ನು ನೀಡಿದರೆ ಜನತೆ ಪರಾವಲಂಬಿಗಳಾಗಿಯೆ ಉಳಿದುಕೊಳ್ಳುವ ಸಾಧ್ಯತೆ ಇರುತ್ತದೆ. ಅದಕ್ಕೆ ಬದಲಾಗಿ ಅವರಲ್ಲಿ ಮನೋಸ್ಥೈರ್ಯವನ್ನು ಹೆಚ್ಚಿಸಿ ಅವರು ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಮಾಜಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಪ್ರತಿ ವರ್ಷದ ಮಾರ್ಚ್ ಮೂರನೆ ಮಂಗಳವಾರ ಒಂದು ಟಿಮ್ ನೊಂದಿಗೆ ವಿಶ್ವ ಸಮಾಜಕಾರ್ಯದಿನವನ್ನು ಆಚರಿಸಲಾಗುತ್ತದೆ. ಈ ವರ್ಷ ‘ಮಾನವ ಸಂಬಂಧಗಳ ಮಹತ್ವವನ್ನು ಉತ್ತೇಜಿಸುವದು’ ಎಂಬ ವಿಷಯವನ್ನು ಇರಿಸಿಕೊಳ್ಳಲಾಗಿದೆ. ಮಾನವ ಸಂಬಂಧಗಳು ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ ಸಂಬಂಧಗಳನ್ನು ಬೆಸೆಯುವ ಅಗತ್ಯವಿದೆ” ಎಂದು ತಿಳಿಸಿದರು. ಕೇಂದ್ರದ ಹಲವು ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು. ಎಂ.ಎಸ್.ಡಬ್ಲ್ಯೂ ವಿದ್ಯಾರ್ಥಿನಿ ಕು. ಶಾಲಿನಿ ಪ್ರಾರ್ಥಿಸಿ, ವಾಸವಿ ಸ್ವಾಗತಿಸಿ, ವಿಷ್ಣು ವಂದಿಸಿ, ಗಾಯತ್ರಿ ಕಾರ್ಯಕ್ರಮ ನಿರೋಪಿಸಿದರು. ವಿಶ್ವ ಸಮಾಜಕಾರ್ಯದಿನದ ಅಂಗವಾಗಿ ಕೇಂದ್ರದ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರಿಗೆ ಉಚಿತ ದಂತ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿತ್ತು.