ಸೋಮವಾರಪೇಟೆ, ಮಾ. 22: ‘ಉತ್ತಮ ನಡವಳಿಕೆಯಿಂದ ಜೀವನ ಮಾಡಿದ್ರೆ ಸರಿ; ಅದು ಬಿಟ್ಟು ಬಾಲ ಬಿಚ್ಚಿದ್ರೆ ಜಿಲ್ಲೆಯಿಂದ ಗಡಿಪಾರು ಮಾಡ್ತೀವಿ’ ಎಂದು ರೌಡಿ ಶೀಟರ್‍ಗಳಿಗೆ ಡಿವೈಎಸ್‍ಪಿ ಎಚ್ಚರಿಕೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಇಲ್ಲಿನ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಯಲ್ಲಿ, ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುತಿಸಲಾಗಿರುವ 20ಕ್ಕೂ ಅಧಿಕ ರೌಡಿ ಶೀಟರ್‍ಗಳ ಪೆರೇಡ್ ನಡೆಸಿದ ಡಿವೈಎಸ್‍ಪಿ ದಿನಕರ್ ಶೆಟ್ಟಿ, ‘ಚುನಾವಣೆ ಹಿನ್ನೆಲೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಸಾರ್ವಜನಿಕ ಶಾಂತಿ ಭಂಗವಾಗುವ ಚಟುವಟಿಕೆಗಳಲ್ಲಿ ಪಾಲ್ಗೊಂಡರೆ ಜಿಲ್ಲೆಯಿಂದಲೇ ಗಡಿಪಾರು ಮಾಡುತ್ತೇವೆ’ ಎಂದು ಎಚ್ಚರಿಸಿದರು.

ಈ ಹಿಂದೆ ಮಾಡಿದ ಅಪರಾಧಗಳಿಗೆ ಪ್ರಾಯಶ್ಚಿತ ಪಟ್ಟು, ಮುಂದಿನ ದಿನಗಳಲ್ಲಿ ಉತ್ತಮ ನಾಗರಿಕರಾಗಿ ಬದುಕಬೇಕು. ಅಪರಾಧಗಳು ಪುನರಾವರ್ತನೆಯಾದರೆ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳುತ್ತೇವೆ ಎಂದ ಡಿವೈಎಸ್‍ಸಿ, ಇದೀಗ ರೌಡಿ ಶೀಟರ್‍ಗಳು ನಡೆಸುತ್ತಿರುವ ವ್ಯವಹಾರದ ಬಗ್ಗೆ ಮಾಹಿತಿ ಪಡೆದು, ಪೊಲೀಸ್ ಇಲಾಖೆ ನಿಮ್ಮ ಚಲನವಲನಗಳ ಮೇಲೆ ನಿಗಾ ವಹಿಸುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂದರ್ಭ ಪೊಲೀಸ್ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಶಿವಶಂಕರ್, ಪ್ರೊಬೇಷನರಿ ಠಾಣಾಧಿಕಾರಿ ಮೋಹನ್ ರಾಜ್ ಅವರುಗಳು ಉಪಸ್ಥಿತರಿದ್ದರು.