ವೀರಾಜಪೇಟೆ, ಮಾ. 21: ಮುಂಬರುವ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮತದಾರರ ಶಿಕ್ಷಣ ಮತ್ತು ಸಹಭಾಗಿತ್ವ ವತಿಯಿಂದ ವಿಶೇಷ ಚೇತನರಿಗೆ ಇಂದು ಮತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಮತದಾರರ ಜಾಗೃತಿ ಅಂಗವಾಗಿ ವಿಶೇಷಚೇತನರು ಇಲ್ಲಿನ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸು ನಿಲ್ದಾಣದ ಬಳಿ ಮತದಾನದ ಪ್ರತಿಜ್ಞಾ ವಿಧಿಸ್ವೀಕರಿಸಿ ನಂತರ ತ್ರಿಚಕ್ರ, ದ್ವಿಚಕ್ರ ವಾಹನಗಳಲ್ಲಿ ತಾಲೂಕು ಕಚೇರಿಯವರೆಗೆ ರ್ಯಾಲಿ ನಡೆಸಿದರು. ತಾಲೂಕು ಕಚೇರಿಗೆ ಬಂದ ವಿಶೇಷಚೇತನ ಮತದಾರರಿಗೆ ಯಾವ ರೀತಿಯಲ್ಲಿ ಮತ ಚಲಾಯಿಸಬೇಕೆಂದು ಪ್ರಾತ್ಯಕ್ಷಿತೆ ಮೂಲಕ ತೋರಿಸಲಾಯಿತು. ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಜಯಣ್ಣ, ವಿಶೇಷಚೇತನ ಇಲಾಖೆಯ ಬಿ.ಪಿ. ದೇವರಾಜು, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಹಾಗೂ ವಿ.ಆರ್.ಡಬ್ಲ್ಯು, ಎಂ.ಆರ್.ಡಬ್ಲ್ಯು ಕಾರ್ಯಕರ್ತರು ಹಾಜರಿದ್ದರು.