ಮಡಿಕೇರಿ, ಮಾ. 22: ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗ್ರಾಹಕರಿಂದ ಆಭರಣ ಪಡೆದು ಸಾಲ ನೀಡುವ ವೇಳೆ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ನಗ ಪರಿವೀಕ್ಷಕ ಶಾಮೀಲಾಗಿ ಸುಮಾರು 9 ಮಂದಿಯಿಂದ ನಕಲಿ ಚಿನ್ನ ಪಡೆದು ರೂ. 53.34 ಲಕ್ಷದಷ್ಟು ವಂಚಿಸಿರುವ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧ ಪಾಲಿಬೆಟ್ಟ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಂ.ಕೆ. ಸುಬ್ರಮಣಿ ನೀಡಿರುವ ಪುಕಾರು ಮೇರೆಗೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಮೊ.ಸಂ. 160/2018 ಕಲಂ 409, 419, 420, ರೆ/ವಿ 34 ಐಪಿಸಿ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.

ಈ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ ಪಿ.ಸಿ. ಕೃಷ್ಣ, ನಗ ಪರಿವೀಕ್ಷಕ ಬಿ.ಎಂ. ವೆಂಕಟೇಶ್ ಹಾಗೂ ಒಂಭತ್ತು ಮಂದಿ ವಿರುದ್ಧ ದೂರು ದಾಖಲಾಗಿದೆ. ಅಲ್ಲದೆ, ಸಂಘದ ಆಡಳಿತ ಮಂಡಳಿ ಯು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಮೇಲಿನ ವಿಶ್ವಾಸದಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಅವಕಾಶ ಕಲ್ಪಿಸಿದ್ದರೆ; ಅವರೇ ವಂಚಿಸಿ ನಕಲಿ ಚಿನ್ನವಿರಿಸಿಕೊಂಡು ರೂ. 29,18,250 ಮೊತ್ತ ವಂಚಿಸಿರುವದು ಬೆಳಕಿಗೆ ಬಂದಿರುವದಾಗಿ ದೂರಿನಲ್ಲಿ ವಿವರಿಸಲಾಗಿದೆ.

ಮಾತ್ರವಲ್ಲದೆ, ಸಂಘದ ಆಡಳಿತ ಮಂಡಳಿಯ ಒಪ್ಪಿಗೆ ಪಡೆಯದೆ ರೂ. 24,15,921 ಮೊತ್ತವನ್ನು ನಗದು ರೂಪದಲ್ಲಿ ದುರುಪಯೋಗ ಮಾಡಿಕೊಂಡಿರುವದಾಗಿ ಪೊಲೀಸ್ ಪುಕಾರಿನಲ್ಲಿ ತಿಳಿಸಲಾಗಿದೆ. ಸಂಘದ ಲೆಕ್ಕಪರಿಶೀಲನೆ ವೇಳೆ ಪ್ರಕರಣ ಬೆಳಕಿಗೆ ಬಂದಿದ್ದರಿಂದ ತಡವಾಗಿ ದೂರು ದಾಖಲಿಸಿರುವದಾಗಿಯೂ ಸ್ಪಷ್ಟಪಡಿಸಿದ್ದಾಗಿದೆ. ಈ ವಂಚನೆ ಪ್ರಕರಣ ಬೆಳಕಿಗೆ ಬಂದ ಬಳಿಕ ಅನೇಕ ಸಲ ಸಂಬಂಧಪಟ್ಟವರಿಗೆ ನೋಟೀಸ್ ಜಾರಿಗೊಳಿಸಿ, ವಂಚಿಸಿರುವ ಹಣವನ್ನು ಸಂಘಕ್ಕೆ ಹಿಂತಿರುಗಿಸಲು ಕಾಲಾವಕಾಶ ನೀಡಿದರೂ ಸ್ಪಂದಿಸದಿರುವ ಮೇರೆಗೆ ಪೊಲೀಸ್ ಪುಕಾರು ನೀಡುವದರೊಂದಿಗೆ ಸಂಘಕ್ಕೆ ಮೋಸ, ನಷ್ಟ, ಅವ್ಯವಹಾರ ವೆಸಗಿದ್ದಲ್ಲದೆ, ಮೋಸವೆಸಗಿರುವ ಸಂಬಂಧ ಸೂಕ್ತ ಕ್ರಮಕ್ಕೆ ಅಧ್ಯಕ್ಷರು ಕೋರಿದ್ದಾರೆ. ಇನ್ನು ಅಧಿಕಾರ ಅವಧಿಯಲ್ಲಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಕೃಷ್ಣ ಅವರಿಗೆ ಹಲವು ಬಾರಿ ಆಡಳಿತ ಮಂಡಳಿಯಿಂದ ಆಭರಣ ಪರಿಶೀಲನೆಗೆ ಸೂಚಿಸಲಾಗಿ, ಸ್ಪಂದಿಸದೆ ನುಣುಚಿಕೊಂಡಿರುವ ಆರೋಪವಿದೆ. ಆ ಮೇರೆಗೆ ಹೊಸತಾಗಿ ಬೇರೊಬ್ಬ ನಗ ಪರಿವೀಕ್ಷಕರ ಮೂಲಕ ಆಡಳಿತ ಮಂಡಳಿಯಿಂದ ನಗದು ಪರಿಶೀಲಿಸಲಾಗಿ, ಚಿನ್ನ ನಕಲಿ ಎನ್ನುವದು ಬೆಳಕಿಗೆ ಬಂದಿದ್ದಾಗಿದೆ. ಈ ಎಲ್ಲವನ್ನೂ ಗಮನಹರಿಸಿರುವ ಆಡಳಿತ ಮಂಡಳಿ ಸಂಘಕ್ಕೆ ವಂಚನೆ ಪ್ರಕರಣದಲ್ಲಿ ಶಾಮೀಲಾಗಿರುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಅಲ್ಲದೆ, ಸಹಕಾರ ಕಾಯ್ದೆ 64ರ ಅಡಿಯಲ್ಲಿಯೂ ತನಿಖೆ ನಡೆಸಲಾಗಿದ್ದು, ಸದ್ಯ ವರದಿ ಸಲ್ಲಿಸಲಾಗುವದು ಎಂದು ಸಂಬಂಧಿಸಿದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಚೆಯ್ಯಂಡಾಣೆ ಕೃಷಿ ಪತ್ತಿನ ಸಂಘದೊಳಗೆ ಅವ್ಯವಹಾರ ಸಂಬಂಧ ಇಲಾಖಾ ತನಿಖೆಯೊಂದಿಗೆ ಪೊಲೀಸ್ ಮೊಕದ್ದಮೆ ದಾಖಲಾಗಿರುವ ಬೆನ್ನಲ್ಲೇ ಪಾಲಿಬೆಟ್ಟ ಕೃಷಿ ಪತ್ತಿನ ಸಂಘದಲ್ಲಿ ಚಿನ್ನ ನಕಲಿ ಹಾಗೂ ಹಣ ವಂಚನೆ ಸಂಬಂಧ ಪೊಲೀಸ್ ಮೊಕದ್ದಮೆ ಹೂಡಿರುವದು ತಡವಾಗಿ ಬಹಿರಂಗಗೊಂಡಿದೆ.