ಮಡಿಕೇರಿ, ಮಾ.21 : ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಗೋಣಿಕೊಪ್ಪಲು ವತಿಯಿಂದ ಮತದಾರರ ಜಾಗೃತಿ ಅಭಿಯಾನ ಕಾರ್ಯಕ್ರಮ ಗೋಣಿಕೊಪ್ಪದಲ್ಲಿ ನಡೆಯಿತು. ಮತದಾನದ ಜಾಗೃತಿಯ ಘೋಷಣೆಯ ಫಲಕಗಳೊಂದಿಗೆ ಶಾಲೆಯ ವಿದ್ಯಾರ್ಥಿಗಳ ಹಾಗೂ ಶಿಕ್ಷಕರ ಮೆರವಣಿಗೆಯು ಪಟ್ಟಣದ ಮುಖ್ಯ ರಸ್ತೆ ಯಲ್ಲಿ ಸಾಗಿ ನಂತರ ಗೋಣಿಕೊಪ್ಪಲುವಿನ ಬಸ್ಸು ನಿಲ್ದಾಣದಲ್ಲಿ ಮತದಾನದ ಜಾಗೃತಿಯ ಕಾರ್ಯಕ್ರಮದ ವಿಚಾರವನ್ನು ಶಾಲೆಯ ದೈಹಿಕ ಶಿಕ್ಷಕ ರಮಾನಂದ ಅವರು ಸಾರ್ವಜನಿಕರಿಗೆ ತಿಳಿಯಪಡಿಸಿದರು.

ಶಾಲೆಯ ವಿದ್ಯಾರ್ಥಿನಿ ಕುಮಾರಿ ಮೊನಿಕ ಮತದಾರರ ಜಾಗೃತಿ ಅಭಿಯಾನದ ಮಹತ್ವವನ್ನು ತಿಳಿಸಿದರು. ಅದೇ ಸಂದರ್ಭದಲ್ಲಿ ಶಾಲೆಯ ಚಿತ್ರಕಲಾ ಶಿಕ್ಷಕರಾದ ಬಿ.ಆರ್. ಸತೀಶ್ ಅವರು ಸ್ಥಳದಲ್ಲಿಯೇ ಮತದಾನದ ಜಾಗೃತಿ ಬಿಂಬಿಸುವ ಚಿತ್ರವನ್ನು ಕ್ಯಾನ್ವಸ್‍ನ ಮೇಲೆ ಚಿತ್ರಿಸಿದರು.

ಅದರಲ್ಲಿ “ನಮ್ಮ ಮತ ನಮ್ಮ ಹಕ್ಕು” ಎಂಬ ಘೋಷಣೆಯನ್ನು ಬರೆದರು. ಮುಖ್ಯೋಪಾಧ್ಯಾಯರಾದ ಕೆ.ಆರ್.ಶಶಿಕಲಾ ಉಪಸ್ಥಿತರಿದ್ದರು. ಗೋಣಿಕೊಪ್ಪ ಕ್ಲಸ್ಟರಿನ ಸಂಪನ್ಮೂಲ ವ್ಯಕ್ತಿ ಜ್ಯೋತಿಶ್ವರಿ ಅವರು ಮಾತನಾಡಿ, ಮತದಾನವು ನಮ್ಮ ಹಕ್ಕು ಪ್ರತಿಯೊಬ್ಬರೂ ಎಪ್ರಿಲ್ 18 ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡುವಂತಾಗಬೇಕು ಎಂದು ಕೋರಿದರು.