ಮಡಿಕೇರಿ, ಮಾ. 22: ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಮಟ್ಟದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗಾಗಿ ನಡೆದ ಸಭೆಯ ತೀರ್ಮಾನದಂತೆ ಕಾವೇರಿ ನದಿ ಮೂಲದಿಂದ ನೀರು ಸಂಗ್ರಹಿಸಿ ಕುಶಾಲನಗರ ಸುತ್ತಮುತ್ತಲ ಪ್ರದೇಶದ ಸಾರ್ವಜನಿಕರಿಗೆ ಸಮರ್ಪಕವಾಗಿ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತಿರುತ್ತದೆ. ಪ್ರತಿನಿತ್ಯ 4 ಎಂಎಲ್‍ಡಿ ಕುಡಿಯುವ ನೀರಿನ ಅವಶ್ಯಕತೆ ಇರುತ್ತದೆ ಹಾಗೂ ಸದ್ಯದ ಪರಿಸ್ಥಿತಿಯಲ್ಲಿ ನೀರಿನ ಅಭಾವ ಉಂಟಾಗಿ ಸಾರ್ವಜನಿಕರಿಗೆ ತೊಂದರೆಯಾಗುತ್ತಿರುವದರಿಂದ ಮೂರು ಕುಡಿಯುವ ನೀರಿನ ಟ್ಯಾಂಕರ್‍ನ್ನು ಬಾಡಿಗೆ ಮುಖಾಂತರ ಪಡೆದು ಸಾರ್ವಜನಿಕರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗಿರುತ್ತದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೇಸಿಗೆಯಿಂದ ನೀರಿನ ಅಭಾವ ಉಂಟಾಗಿದ್ದು, ನೀರಿನ ಮೂಲ ಕಡಿಮೆಯಾಗಿ ರುವದರಿಂದ ಸಾರ್ವಜನಿಕರಿಗೆ ಸಮರ್ಪಕವಾಗಿ ನೀರನ್ನು ಸರಬರಾಜು ಮಾಡಲು ಕಷ್ಟ ಸಾಧ್ಯವಾಗಿರುತ್ತದೆ.ಕುಶಾಲನಗರಕ್ಕೆ ಕುಡಿಯುವ ನೀರಿನ ಅವಶ್ಯಕತೆ ಇರುವದರಿಂದ ಚಿಕ್ಲಿಹೊಳೆಯಿಂದ 100 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡುವಂತೆ ಸಹಾಯಕ ಕಾರ್ಯಪಾಲಕ ಅಭಿಯಂತರರು, ಹಾರಂಗಿ ಅಣೆಕಟ್ಟು ವಿಭಾಗ, ಹುಲುಗುಂದ ಇವರಿಗೆ ಸೂಕ್ತ ನಿರ್ದೇಶನ ನೀಡಲಾಗಿರುತ್ತದೆ.ಕಾವೇರಿ ನದಿ ಮೂಲದಲ್ಲಿ ಯಾವದೇ ಪಂಪುಸೆಟ್‍ಗಳನ್ನು ಅಳವಡಿಸಿಕೊಂಡು ತೋಟಗಳಿಗೆ ಉಪಯೋಗಿಸುವದಾಗಲಿ ಹಾಗೂ ಇತರ ಯಾವದೇ ಕೆಲಸ ಕಾರ್ಯಗಳಿಗೆ ಕಾವೇರಿ ನದಿಗೆ ಪಂಪುಸೆಟ್‍ನ್ನು ಅಳವಡಿಸುವದನ್ನು ನಿಷೇಧಿಸಲಾಗಿದೆ. ಅಲ್ಲದೆ ಸೆಕ್ಷನ್ 144ನ್ನು ಜಾರಿಗೊಳಿಸಲಾಗಿರುತ್ತದೆ. ಇದನ್ನು ಮೀರಿ ನದಿ ಮೂಲದ ರೈತರು ಪಂಪ್‍ಸೆಟ್ ಮೂಲಕ ಕಾವೇರಿ ನದಿ ನೀರನ್ನು ಎತ್ತುತಿರುವದು ಕಂಡು ಬಂದಲ್ಲಿ ಅಂತಹವರ ವಿರುದ್ಧ ಕಾನೂನು ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಲಾಗುವದೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.