ಮಡಿಕೇರಿ, ಮಾ. 21: ಆಸ್ತಿಗಾಗಿ ಸಹೋದರನನ್ನು ಗುಂಡಿಕ್ಕಿ ಹತ್ಯೆಗೈದಾತನಿಗೆ ಇಲ್ಲಿನ ನ್ಯಾಯಾಲಯ ದಂಡ ಸಹಿತ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಹರದೂರು ಗ್ರಾಮದ ನಿವಾಸಿ ಎಂ.ಡಿ. ಕಾವೇರಪ್ಪ (ಹರೀಶ್) ಹಾಗೂ ಆತನ ಸಹೋದರ ಸುರೇಶ್ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಹವಿದ್ದು, ಕಳೆದ ತಾ. 14.7.2017 ರಂದು ಸುರೇಶ್ ತಮ್ಮ ಮನೆಯ ಬಳಿ ಇರುವ ಗದ್ದೆಯ ಬಳಿ ನಡೆದುಕೊಂಡು ಹೋಗುತ್ತಿರುವಾಗ ಕಾವೇರಪ್ಪ ಗುಂಡು ಹಾರಿಸಿ ಹತ್ಯೆಗೈದಿದ್ದ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಡಿ. ಪವನೇಶ್ ಅವರು ಆರೋಪಿಗೆ ಹತ್ಯೆ ಮಾಡಿದ ಕಾರಣಕ್ಕಾಗಿ ಸೆಕ್ಷನ್ 302ರಡಿ ರೂ. 15 ಸಾವಿರ ದಂಡ ವಿಧಿಸಿದ್ದಾರೆ.ಸೆಕ್ಷನ್ 506ರಡಿ ಎರಡು ವರ್ಷ ಸಜೆ ಹಾಗೂ ರೂ. 3 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಎರಡು ತಿಂಗಳ ಅಧಿಕ ಸಜೆ, ಸೆಕ್ಷನ್ 5ರಲ್ಲಿ ಓದಲಾದ 27(1) ಶಸ್ತ್ರಾಸ್ತ್ರ ಕಾಯ್ದೆ 1959ರಡಿ 5 ವರ್ಷ ಸಜೆ ಹಾಗೂ 10 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಒಂದು ತಿಂಗಳ ಅಧಿಕ ಸಜೆ ಹಾಗೂ ಶಸ್ತ್ರಾಸ್ತ್ರ ಕಾಯ್ದೆ ಸೆಕ್ಷನ್ 30 ರಡಿ 6 ತಿಂಗಳ ಸಜೆ ಹಾಗೂ 2 ಸಾವಿರ ದಂಡ, ದಂಡ ತೆರಲು ತಪ್ಪಿದಲ್ಲಿ ಮತ್ತೆ ಒಂದು ತಿಂಗಳ ಅಧಿಕ ಸಜೆ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ಈ ಎಲ್ಲ ಸಜೆಯನ್ನು ಏಕಕಾಲದಲ್ಲಿ ಅನುಭವಿಸುವಂತೆಯೂ, ವಸೂಲಾತಿಯಾಗುವ ದಂಡದ ಹಣದಲ್ಲಿ ರೂ. 25 ಸಾವಿರ ಹಣವನ್ನು ಹತ್ಯೆಗೀಡಾದ ಸುರೇಶ್ ಅವರ ಪತ್ನಿ ಶಾರದಾ ಅವರಿಗೆ ಪರಿಹಾರವಾಗಿ ನೀಡುವಂತೆ ತೀರ್ಪಿನಲ್ಲಿ ಆದೇಶಿಸಿದ್ದಾರೆ. ಸರಕಾರದ ಪರ ಸರಕಾರಿ ಅಭಿಯೋಜಕಿ ಕೃಷ್ಣವೇಣಿ ಅವರು ವಾದ ಮಂಡಿಸಿದರು.