ಮಡಿಕೇರಿ, ಮಾ. 21: ಮಡಿಕೇರಿಯ ಜನತೆಗೆ ಅನೇಕ ದಶಕಗಳಿಂದ ಆಸರೆಯಾಗಿದ್ದ ಗಾಳಿಬೀಡು ಸಮೀಪದ ಕೂಟುಹೊಳೆಯು ಬತ್ತುವದರೊಂದಿಗೆ ಜಲಮೂಲ ಪಾತಾಳಕ್ಕೆ ಇಳಿದಿದೆ. ಈ ನಡುವೆ ಅಲ್ಲಿನ ಕುಂಡಾಮೇಸ್ತ್ರಿ ನೀರು ನಗರದ ಜನತೆಯ ದಾಹ ನೀಗಿಸಲು ಆಸರೆಯಾಗುವಂತಾಗಿದೆ. ಕೂಟುಹೊಳೆ ನೀರು ಸಂಗ್ರಹಗಾರದಲ್ಲಿ ತೀರಾ ಬತ್ತಿ ಹೋಗಿರುವ ದೃಶ್ಯ ಗೋಚರಿಸಿದೆ. ಈ ಸಂದರ್ಭ ಕಳೆದ ಮಳೆಗಾಲದಲ್ಲಿ ಕೊಚ್ಚಿ ಹೋಗಿ ಬರಿದಾಗಿದ್ದ ಕುಂಡಾಮೇಸ್ತ್ರಿ ನೀರು ಸಂಗ್ರಹಗಾರದಲ್ಲಿ ಉತ್ತಮ ಜಲಮೂಲದೊಂದಿಗೆ ಯಥೇಚ್ಚವಾಗಿ ಶೇಖರಣೆಯಾಗಿದೆ.ಹೀಗಾಗಿ ಪ್ರತಿನಿತ್ಯ ಇಡೀ ರಾತ್ರಿ ಕುಂಡಾಮೇಸ್ತ್ರಿ ಜಲಗಾರದಿಂದ ಕೂಟು ಹೊಳೆಯ ಟ್ಯಾಂಕ್‍ಗೆ ನೀರನ್ನು ಹಾಯಿಸುವ ಮುಖಾಂತರ ಇಲ್ಲಿನ ಸ್ಟೋನ್‍ಹಿಲ್ ಬಳಿಯ ನೀರು ಸಂಗ್ರಹಾಗಾರದಲ್ಲಿ ಶುದ್ಧೀಕರಿಸಿ, ಮಡಿಕೇರಿಯ ಜನತೆಗೆ ನಗರಸಭೆಯಿಂದ ನೀರನ್ನು ಪೂರೈಸಲಾಗುತ್ತಿದೆ. ಕೂಟುಹೊಳೆ ನೀರು ಬತ್ತುತ್ತಿರುವ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ನಗರಸಭೆ ಅಧಿಕಾರಿಗಳು, ಸಾಕಷ್ಟು ಪ್ರಮಾಣದಲ್ಲಿ ಮರಳು ಮೂಟೆಗಳಿಂದ ತಡೆಗೋಡೆ ನಿರ್ಮಿಸಿ ಮಡಿಕೇರಿಗೆ ಕುಡಿಯುವ ನೀರು ಸರಬರಾಜುಗೊಳಿಸಲು ತಾತ್ಕಾಲಿಕ ಕ್ರಮ ತೆಗೆದುಕೊಂಡಿದ್ದಾರೆ.

ಮಾತ್ರವಲ್ಲದೆ; ಈ ಯೋಜನೆಯ ಗುತ್ತಿಗೆದಾರ ತುಮಕೂರಿನ ರಮೇಶ್ ಎಂಬವರಿಗೆ ಮತ್ತೆ ರೂ. 5 ಕೋಟಿ ವೆಚ್ಚದಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮಂಡಳಿಯಿಂದ ಕುಂಡಾಮೇಸ್ತ್ರಿಯಲ್ಲಿ ಶಾಶ್ವತ ಕಿರು ಅಣೆಕಟ್ಟೆ ನಿರ್ಮಿಸಲು ಕಾಮಗಾರಿ ಕೂಡ ಟೆಂಡರ್ ಮೂಲಕ ನೀಡಲಾಗಿದೆ. ಆದರೆ, ಈ ಗುತ್ತಿಗೆದಾರರು ಈಗಾಗಲೇ ಭೂಮಿಪೂಜೆ ನಡೆಸಿ ಆ ಬಳಿಕ ಕೆಲಸ ಆರಂಭಿಸದಿರುವದು ಬೆಳಕಿಗೆ ಬಂದಿದೆ.

ನಿಖರ ಲೆಕ್ಕವಿಲ್ಲ: ಅಲ್ಲದೆ ಕುಂಡಾಮೇಸ್ತ್ರಿ ಯೋಜನೆಯ ಕಾಮಗಾರಿಯು ಆರೆಂಟು ವರ್ಷಗಳಿಂದ ಜಾರಿಗೊಂಡು, ಅನೇಕ ಕೋಟಿ ವೆಚ್ಚವಾಗಿದ್ದರೂ, ಇದುವರೆಗೆ ನಿಖರವಾಗಿ ಎಷ್ಟು ಹಣ ವ್ಯಯಿಸಲಾಗಿದೆ ಎಂಬ ಖಚಿತ ಮಾಹಿತಿ ಯಾರ ಬಳಿಯೂ ಲಭಿಸುತ್ತಿಲ್ಲ. ಈ ಯೋಜನೆಯೊಂದಿಗೆ ಕೂಟುಹೊಳೆಯಲ್ಲಿ ನೀರು ಸಂಗ್ರಹಿಸಲು ಎಕರೆಗಟ್ಟಲೆ (ಮೊದಲ ಪುಟದಿಂದ) ಕೃಷಿ ಭೂಮಿಯನ್ನು ಖಾಸಗಿಯವರಿಂದ ಖರೀದಿಸಿ ಮೂರು ವರ್ಷ ಹಿಂದೆ ಹೂಳೆತ್ತುವ ಕೆಲಸವಾಗಿತ್ತು. ಅದು ಬೇಸಿಗೆಯಲ್ಲಿ ನೀರು ಸಂಗ್ರಹಿಸುವ ಸಲುವಾಗಿಯೇ ಆಗಿತ್ತು.

ಆದರೆ ಪ್ರಸಕ್ತ ಆ ಪ್ರದೇಶದಲ್ಲಿ ತೋರಿಕೆಗೆ ಅಲ್ಲಲ್ಲಿ ಹೂಳೆತ್ತಿರುವ ದೃಶ್ಯ ಗೋಚರಿಸಿದರೂ, ಹನಿ ನೀರು ಸಂಗ್ರಹವಾಗದೆ, ಕೂಟುಹೊಳೆ ಹಿನ್ನೀರು ಪ್ರದೇಶ ಈಗಾಗಲೇ ಬರಡಾಗಿರುವ ಸ್ಥಿತಿ ಕಂಡುಬರುವಂತಾಗಿದೆ. ಹೀಗಾಗಿ ಕೂಟುಹೊಳೆ ಹಾಗೂ ಕುಂಡಾ ಮೇಸ್ತ್ರಿ ಜಲಮೂಲ ಪ್ರದೇಶದ ಗ್ರಾಮಸ್ಥರು ಕೂಡ ನಗರಸಭೆ ಕಾರ್ಯವೈಖರಿ ವಿರುದ್ಧ ಅಸಹನೆ ವ್ಯಕ್ತಪಡಿಸುತ್ತಿದ್ದಾರೆ.

ಈ ಯೋಜನೆಯಿಂದ ಗಾಳಿಬೀಡು ವ್ಯಾಪ್ತಿಯ ರಸ್ತೆಗಳು ತೀರಾ ಹಾಳಾಗಿದ್ದು, ಆ ಭಾಗದ ಜನತೆಯ ಕುಡಿಯುವ ನೀರಿಗೆ ವ್ಯವಸ್ಥೆ ಕಲ್ಪಿಸಿಕೊಡಲಾಗುವದು ಎಂದು ಆರಂಭಿಕ ನೀಡಿದ್ದ ಭರವಸೆ ಹುಸಿಯಾಗಿದೆ ಎನ್ನುವದು ಗ್ರಾಮಸ್ಥರ ಅಸಮಾಧಾನಕ್ಕೆ ಮುಖ್ಯ ಕಾರಣ. ಅಲ್ಲದೆ, ಈ ಸಂಬಂಧ ಅನೇಕಸಲ ಗ್ರಾಮಸಭೆ ನಿರ್ಣಯಕೈಗೊಂಡು ನಗರಸಭೆಗೆ ಖುದ್ದು ಪತ್ರ ರವಾನಿಸಿದರೂ, ಇದುವರೆಗೆ ಸೌಜನ್ಯಕ್ಕೂ ಉತ್ತರ ನೀಡಿಲ್ಲ ಎಂಬ ಟೀಕೆ ಇದೆ.

ಗಂಭೀರ ಸ್ವರೂಪ: ಪರಿಣಾಮ ದಿನೇ ದಿನೇ ಗಾಳಿಬೀಡು ಗ್ರಾ.ಪಂ. ಹಾಗೂ ಮಡಿಕೇರಿ ನಗರಸಭೆ ನಡುವಿನ ಮುಸುಕಿನ ಗುದ್ದಾಟ ಗಂಭೀರ ಸ್ವರೂಪ ಪಡೆಯುವ ದರೊಂದಿಗೆ, ಗ್ರಾ.ಪಂ. ಮಡಿಕೇರಿಗೆ ನೀರು ಪೂರೈಕೆ ತಡೆಹಿಡಿಯುವ ಬೆದರಿಕೆಯೊಡ್ಡು ವಂತಾಗಿದೆ. ಇನ್ನೊಂದೆಡೆ ನೈಸರ್ಗಿಕ ಜಲ ಮೂಲವೂ ಬಿಸಿಲಿನ ಸುಡು ತಾಪದ ನಡುವೆ ಬತ್ತುವಂತಾಗಿದೆ.

ಜಿಲ್ಲಾಧಿಕಾರಿ ಭೇಟಿ: ಸಮಸ್ಯೆಯ ಜಟಿಲ ಸ್ಥಿತಿ ಗಮನಿಸಿರುವ ಜಿಲ್ಲಾಧಿಕಾರಿ ಅನೀಶ್ ಕಣ್ಮಣಿ ಜಾಯ್ ಅವರು ಇಂದು ಕುಂಡಾಮೇಸ್ತ್ರಿ ಹಾಗೂ ಕೂಟುಹೊಳೆ ವ್ಯಾಪ್ತಿಯಲ್ಲಿ ಖುದ್ದಾಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಭಾರೀ ಹಣ ವ್ಯಯಿಸುವ ಮೂಲಕ ಕೂಟುಹೊಳೆ ಮತ್ತು ಕುಂಡಾಮೇಸ್ತ್ರಿ ಯೋಜನೆ ರೂಪಿಸಿದರೂ, ಕುಡಿಯುವ ನೀರಿನ ಬವಣೆಯನ್ನು ಶಾಶ್ವತವಾಗಿ ಇತ್ಯರ್ಥಗೊಳಿಸಲು ಅಸಾಧ್ಯ ವಾಗುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾಗಿ ಗೊತ್ತಾಗಿದೆ. ನಗರಸಭಾ ಆಯುಕ್ತ ರಮೇಶ್, ನೀರಾವರಿ ಅಭಿಯಂತರ ನಾಗರಾಜ್ ಇನ್ನಿತರರು ಈ ವೇಳೆ ಹಾಜರಿದ್ದರು.