ಮಡಿಕೇರಿ, ಮಾ. 22: ಲೋಕಸಭಾ ಚುನಾವಣೆ ಹಿನ್ನೆಲೆ ವಿವಾಹ ಸೇರಿದಂತೆ ಸಾಂಪ್ರದಾಯಿಕ ಸಮಾರಂಭಗಳಲ್ಲಿ ಮದ್ಯ ಬಳಕೆಗೆ ನಿಯಮಗಳನ್ನು ಕಡ್ಡಾಯಗೊಳಿಸಿ ಅನುಮತಿಗಾಗಿ ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. ವಿಭಿನ್ನ ಸಂಸ್ಕøತಿಯ ಕೊಡಗು ಜಿಲ್ಲೆಯ ಮಟ್ಟಿಗೆ ಈ ನಿಯಮಗಳನ್ನು ಸಡಿಲಿಸಬೇಕೆಂದು ಒತ್ತಾಯಿಸಿ ಕೊಡಗು ಕೊಡವ ಸಮಾಜಗಳ ಒಕ್ಕೂಟ ಹಾಗೂ ಕೊಡಗು ಗೌಡ ಸಮಾಜಗಳ ಒಕ್ಕೂಟ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕೊಡಗು ಜಿಲ್ಲೆ ತನ್ನದೇ ಆದ ಆಚಾರ ವಿಚಾರಗಳನ್ನು ಹೊಂದಿದ್ದು, ಇತರ ಜಿಲ್ಲೆಗಳಿಂತ ಭಿನ್ನವಾದ ಸಂಸ್ಕøತಿ ಇಲ್ಲಿದೆ. ಕೊಡಗಿನ ಜನರು ಧಾರ್ಮಿಕ ಸಂಪ್ರದಾಯದಂತೆ ಶಸ್ತ್ರಗಳ ಬಳಕೆ ಹಾಗೂ ಕೆಲವು ಹಬ್ಬಗಳು, ವಿವಾಹ ಮತ್ತು ಇನ್ನಿತರ ಸಮಾರಂಭಗಳಲ್ಲಿ ಮದ್ಯವನ್ನು ಬಳಕೆ ಮಾಡುತ್ತಾರೆ. ಆದರೆ ಎಲ್ಲಿಯೂ ಅಶಾಂತಿಗೆ ಅವಕಾಶ ಕಲ್ಪಿಸಿಕೊಟ್ಟಿಲ್ಲ. ಲೋಕಸಭಾ ಚುನಾವಣೆಯ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರುವದರಿಂದ ಕೊಡಗಿನ ಸಾಂಪ್ರದಾಯಿಕ ಆಚರಣೆಗಳಿಗೆ ಅಡ್ಡಿಯಾಗಿದೆ.

ಮದ್ಯ ಬಳಕೆಗೆ ಅನುಮತಿಯನ್ನು ಪಡೆಯಲು ಅಧಿಕ ಶುಲ್ಕವನ್ನು ವಿಧಿಸಲಾಗುತ್ತಿದೆ. ಇದರಿಂದ ವಿವಾಹ ಸಮಾರಂಭ ನಡೆಸುವ ಕುಟುಂಬಗಳಿಗೆ ಆರ್ಥಿಕ ಹೊರೆಯಾಗುತ್ತಿದೆ ಎಂದು ಒಕ್ಕೂಟಗಳ ಪ್ರಮುಖರು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಗಮನ ಸೆಳೆದರು.ವಿವಾಹ ಸಮಾರಂಭಗಳಲ್ಲಿ ಮದ್ಯ ಬಳಕೆಯ ಮೇಲೆ ವಿಧಿಸಿರುವ ಕಟ್ಟುನಿಟ್ಟಿನ ನಿಯಮಗಳನ್ನು ಸಡಿಲಿಸಬೇಕು ಮತ್ತು ಅನುಮತಿ ಶುಲ್ಕವನ್ನು ಪಡೆಯಬಾರದುಎಂದು ಪ್ರಮುಖರು ಮನವಿ ಮಾಡಿದರು. ಇದೇ ಸಂದರ್ಭ ಅಬಕಾರಿ ಇಲಾಖೆಯ ಜಿಲ್ಲಾ ಅಧಿಕಾರಿಗಳಿಗೂ ಮನವಿ ಪತ್ರ ಸಲ್ಲಿಸಿದರು. ಬೇಡಿಕೆಯ ಕುರಿತು ಚುನಾವಣಾ ಅಧಿಕಾರಿಗಳ ಗಮನ ಸೆಳೆಯವದಾಗಿ ಅಧಿಕಾರಿಗಳು ಭರವಸೆ ನೀಡಿದರು.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಉಪಾಧ್ಯಕ್ಷ ಚಿಣ್ಣಪ್ಪ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿಕಾಳಪ್ಪ, ನಾಪೋಕ್ಲು ಕೊಡವ ಸಮಾಜದ ಅಧ್ಯಕ್ಷ ಮನುಮುತ್ತಪ್ಪ, ಎಂ.ಬಿ.ದೇವಯ್ಯ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಕೊಲ್ಯದ ಗಿರೀಶ್, ಅಂಬೆಕಲ್ಲು ನವೀನ್ ಕುಶಾಲಪ್ಪ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ಹೊಸೂರು ರಮೇಶ್ ಜೋಯಪ್ಪ, ಕೊಡಗು ಗೌಡ ಸಮಾಜದ ಅಧ್ಯಕ್ಷ ಪೇರಿಯನ ಜಯಾನಂದ, ಕೋಳುಮುಡಿಯನ ಅನಂತಕುಮಾರ್ ಮತ್ತಿತರ ಪ್ರಮುಖರು ಈ ಸಂದರ್ಭ ಹಾಜರಿದ್ದರು.