ಮಡಿಕೇರಿ, ಮಾ. 22: ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ(ಡಯಟ್), ಕೂಡಿಗೆ ಇವರ ಸಹಯೋಗದಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ಗಳ ಸಂಚಾಲಕರಿಗೆ ಎರಡು ದಿನಗಳ ತರಬೇತಿಯು ನಗರದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಇತ್ತೀಚೆಗೆ ನಡೆಯಿತು.

ಮಡಿಕೇರಿ ತಾಲೂಕಿನ ಎಲ್ಲಾ ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಐ.ಟಿ.ಐ. ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಿಂದ ಆಯ್ಕೆಯಾದ ಮತದಾರರ ಸಾಕ್ಷರತಾ ಕ್ಲಬ್‍ಗಳ ಸಂಚಾಲಕರುಗಳಿಗೆ ತರಬೇತಿ ನೀಡಲಾಯಿತು.

ತರಬೇತಿ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಚ್ಚಾಡೋ ಉದ್ಘಾಟಿಸಿದರು. 18 ರಿಂದ 19 ವಯೋಮಾನದ ಯುವ ಸಮೂಹ ಮತದಾರರ ಪಟ್ಟಿಗೆ ಹೆಸರು ಸೇರಿಸುವಂತೆ ಮನವೊಲಿಸಬೇಕೆಂದು ಸಾಕ್ಷರತಾ ಸಂಘಗಳ ಸಂಚಾಲಕರುಗಳಿಗೆ ಕರೆ ನೀಡಿದರು.

ಮಡಿಕೇರಿ ತಾಲೂಕು ತಹಶೀಲ್ದಾರ್ ನಟೇಶ್ ಮಾತನಾಡಿ, ಪ್ರಜಾಪ್ರಭುತ್ವದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ತರಬೇತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಎನ್. ಗಾಯತ್ರಿ ಅವರು ತರಬೇತಿಯ ರೂಪುರೇಷೆಗಳ ಬಗ್ಗೆ ಮಾಹಿತಿ ನೀಡಿದರು. ನಾವೆಲ್ಲರೂ ನಮ್ಮ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಸಮಾನ ಆಸಕ್ತಿ ಹೊಂದಿರಬೇಕು. ಪ್ರಜಾಪ್ರಭುತ್ವದಲ್ಲಿ ಪ್ರತಿಯೊಂದು ಮತವೂ ಬಹಳ ಮೌಲ್ಯಯುತವಾಗಿರುವದರಿಂದ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ಮತದಾರರೂ ಕಡ್ಡಾಯವಾಗಿ ಮತ ಚಲಾಯಿಸಿ ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು ಎಂದು ಕರೆ ನೀಡಿದರು. ಎರಡು ದಿನಗಳ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗಮಂಡಲ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಕೆ.ಜೆ. ದಿವಾಕರ ಸಂಪಾಜೆ ಪ್ರೌಢಶಾಲೆಯ ಶಿಕ್ಷಕ ಕುಮಾರ್ ಮತ್ತು ಹಾಕತ್ತೂರು ಪ್ರೌಢಶಾಲಾ ಶಿಕ್ಷಕ ಮುನೀರ್ ಮೊಹಿದ್ ಭಾಗವಹಿಸಿದ್ದರು. ಕ್ಷೇತ್ರ ಸಂಪನ್ಮೂಲ ಕೇಂದ್ರದ ಅಧಿಕಾರಿಗಳಾದ ಪುಟ್ಟರಂಗನಾಥ, ಮಂಜುಳ, ಜಯಮ್ಮ ಮತ್ತು ಪ್ರಸಾದ್ ಉಪಸ್ಥಿತರಿದ್ದರು.