ಜಿಲ್ಲಾ ಕಾಂಗ್ರೆಸ್ ಆರೋಪ
ಮಡಿಕೇರಿ, ಮಾ.22 : ಪ್ರತಿಯೊಬ್ಬ ಭಾರತೀಯನಿಗೆ ಬದುಕು ಕಟ್ಟಿಕೊಟ್ಟ ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಹೊರಟಿದೆ ಎಂದು ಆರೋಪಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಭಾರತೀಯರ ಬದುಕಾಗಿರುವ ಸಂವಿಧಾನವನ್ನು ಕಾಪಾಡುವ ಜವಾಬ್ದಾರಿ ಈ ದೇಶದ ಬಹುಜನರ ಮೇಲಿದೆ ಎಂದು ಅಭಿಪ್ರಾಯಪಟ್ಟಿದೆÉ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೆಸ ವಕ್ತಾರ ಟಿ.ಈ. ಸುರೇಶ್ ಅವರು, ಮುಂಬರುವ ಚುನಾವಣೆ ಈ ದೇಶದ ಜನರಿಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.
ಸ್ವಾತಂತ್ರ್ಯಪೂರ್ವದಲ್ಲಿ ಈ ದೇಶದಲ್ಲಿ ಜಾತಿ ಆಧಾರಿತ ಕುಲಕಸುಬು ಜಾರಿಯಲ್ಲಿತ್ತು. ಶಿಕ್ಷಣ ಕೆಲವು ವರ್ಗದವರಿಗೆ ಮಾತ್ರ ಸೀಮಿತವಾಗಿತ್ತು. ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕು ಕೂಡಾ ಕೆಲವು ವರ್ಗದವರಿಗೆ ಮತ್ತು ಸರಕಾರಕ್ಕೆ ತೆರಿಗೆ ಪಾವತಿಸುವವರಿಗೆ ಮಾತ್ರ ಇತ್ತು. ಅಂಬೇಡ್ಕರ್ ಅವರು ಈ ದೇಶಕ್ಕೆ ಸಂವಿಧಾನವನ್ನು ನೀಡಿದ ಬಳಿಕ ಯಾವದೇ ಜಾತಿಯವರು ಯಾವ ಹುದ್ದೆಯನ್ನಾದರೂ ಪಡೆಯುವ ಅವಕಾಶ ಲಭ್ಯವಾಯಿತು. ಎಲ್ಲಾ ವರ್ಗದವರು ತಮಗೆ ಇಚ್ಛೆ ಇರುವ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಮತದಾನ ಮತ್ತು ಚುನಾವಣೆಗೆ ಸ್ಪರ್ಧಿಸುವ ಹಕ್ಕು ಲಭಿಸಿತು. ಆ ಮೂಲಕ ದೇಶದ ಬಹುಜನರು ಸಂವಿಧಾನದ ಮುಖಾಂತರ ಬದುಕು ಕಟ್ಟಿಕೊಳ್ಳಲು ಸಾಧ್ಯವಾಯಿತು ಎಂದು ವಿವರಿಸಿದರು. ಆದರೆ ಇಂದು ಸಂವಿಧಾನವನ್ನೇ ಬದಲಾಯಿಸಿ ಬಡವರ ಮತ್ತು ಬಹುಜನರ ಬದುಕನ್ನೇ ಕಿತ್ತುಕೊಳ್ಳಲು ಬಿಜೆಪಿ ಮುಂದಾಗಿದೆ ಎಂದು ಟೀಕಿಸಿದರು.
ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್. ರಮಾನಾಥ್ ಮಾತನಾಡಿ, ಮುಂಬರುವ ಲೋಕಸಭಾ ಚುನಾವಣೆ ಭ್ರಮೆ ಮತ್ತು ವಾಸ್ತವದ ನಡುವಿನ ಚುನಾವಣೆಯಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ವಕ್ಫ್ ಮಂಡಳಿ ಹಾಗೂ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕೆ.ಎ ಯಾಕೂಬ್, ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ ಹಾಗೂ ರಾಘವೇಂದ್ರ ಉಪಸ್ಥಿತರಿದ್ದರು.