ಪೊನ್ನಂಪೇಟೆ, ಮಾ. 21: ದಕ್ಷಿಣ ಕೊಡಗಿನಲ್ಲಿ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.ಮಳೆಯಿಲ್ಲದೇ ನೀರಿನ ಕೊರತೆಯಿಂದಾಗಿ ಕಾಫಿ ಗಿಡದಲ್ಲಿ ಚಿಗರೊಡೆದಿಲ್ಲ. ಇದು ಮಲೆನಾಡಿನ ರೈತರ ಮುಖದಲ್ಲಿ ಕಾರ್ಮೋಡ ಕವಿಯಲು ಕಾರಣವಾಗಿದೆ.

ಹೂವಿನ ಮಳೆ ಎಂದೇ ಕರೆಯಲಾಗುತ್ತಿದ್ದ, ರೇವತಿ ನಕ್ಷತ್ರದಲ್ಲಿ ಸುರಿಯಬೇಕಿದ್ದ ರೇವತಿ ಮಳೆಯಿಲ್ಲದೇ ಕಾಫಿ ಗಿಡಗಳಲ್ಲಿ ಚಿಗುರೊಡೆಯುತ್ತಿಲ್ಲ. ಹಿಂದೆ ಫೆಬ್ರವರಿಯಲ್ಲಿ ಸ್ವಲ್ಪ ಮಳೆಯಾಗಿ ದ್ದರಿಂದ ಕಾಫಿತೋಟಗಳಲ್ಲಿ ಹೂವರಳಿ ನಿಂತಿತ್ತು. ಬಳಿಕ ಫಸಲುಗಟ್ಟುವ ಹೊತ್ತಿಗೆ ಮತ್ತೆ ಮಳೆಯಾಗುತ್ತಿದ್ದರಿಂದ ಕಾಫಿ ಬೆಳೆಗೆ ಸುಗ್ಗಿ ಕಾಲವೆಂದೇ ಭಾವಿಸಲಾಗುತ್ತಿತ್ತು. ಆದರೆ ಈಗ ರೇವತಿ ಮಳೆ ಕೈ ಕೊಟ್ಟಿದೆ. ಕಾಫಿ ಚಿಗುರು ತೆಗೆಯುವ ಕಾರ್ಯ ನಡೆಯಬೇಕಿತ್ತು. ಮಡಿಕೇರಿಯಲ್ಲಿನ ಕೆಲವು ಭಾಗಗಳನ್ನು ಹೊರತು ಪಡಿಸಿದರೆ ಉಳಿದ ಭಾಗಗಳಲ್ಲಿ ಮಳೆಯಾಗಿಲ್ಲ. ಬಿಸಿಲ ಝಳ ಹೆಚ್ಚಿದೆ. ಒಣ ಹವೆ ಮುಂದುವರೆದಿದ್ದು ತಾಪಮಾನದಲ್ಲಿ ಏರಿಕೆಯಾಗಿದೆ.

ಹೆಚ್ಚುತ್ತಿರುವ ತಾಪಮಾನದಿಂದ ಫಸಲುಗಟ್ಟಬೇಕಾದ ಸಾಂದ್ರವಿಲ್ಲದೆ ಕಾಫಿ ಗಿಡಗಳು ಬಿಸಿಲಿನ ಝಳಕ್ಕೆ ಬಾಡುತ್ತಿದೆ. ಇನ್ನು ಒಂದೆರಡು ವಾರದಲ್ಲಿ ಮಳೆ ಬಾರದಿದ್ದಲ್ಲಿ ತೋಟದಲ್ಲಿನ ಕಾಫಿ ಬೆಳೆಯನ್ನು ಉಳಿಸಿಕೊಳ್ಳುವದು ಕಷ್ಟಕರವಾಗಲಿದೆ. ವೀರಾಜಪೇಟೆ ತಾಲೂಕಿನ ಹಲವೆಡೆ ಕಾಫಿ ತೋಟಗಳಿಗೆ ಬರದ ಛಾಯೆ ತಟ್ಟುವ ಮೂಲಕ ಕಾಫಿ ಗಿಡಗಳು ನೀರಿಲ್ಲದೇ ಒಣಗುತ್ತಿವೆ.

ಸಣ್ಣ ಪುಟ್ಟ ಹೊಳೆ, ಕೆರೆಗಳ ಮೂಲಕ ನೀರನ್ನು ಕಾಫಿ ತೋಟದ ಮಾಲೀಕರು ಪೈಪ್‍ಗಳ ಮೂಲಕ ತೋಟಕ್ಕೆ ಹಾಯಿಸಿಕೊಳ್ಳುತ್ತಿದ್ದು ಈ ಬಾರಿ ಮಳೆ ಇಲ್ಲದ ಕಾರಣ ನೀರಿನ ಮೂಲಗಳೆಲ್ಲವೂ ಬತ್ತಿ ಹೋಗಿವೆ. ಹಳ್ಳಗಳೆಲ್ಲ ಒಣಗಿವೆ. ಇದರಿಂದ ಅಂತರ್ಜಲ ಮಟ್ಟವೂ ಕುಸಿತ ಕಂಡು ಕೊಳವೆ ಬಾವಿಗಳಲ್ಲಿಯೂ ನೀರು ಇಲ್ಲದಂತಾಗಿ ಸಾವಿರಾರು ಎಕರೆ ಪ್ರದೇಶ ದಲ್ಲಿನ ಕಾಫಿ ಗಿಡಗಳು ಒಣಗಿರುವದು ಕಂಡು ಬರುತ್ತಿದೆ.

ಕಾಫಿ ತೋಟಗಳು ಒಣಗುತ್ತಿರು ವದರಿಂದ ಕೂಲಿಯನ್ನೇ ನಂಬಿ ಕೊಂಡು ಜೀವನ ಸಾಗಿಸುತ್ತಿರುವ ತೋಟದ ಕಾರ್ಮಿಕರು ಪರಿತಪಿಸು ವಂತಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಬಂದು ಇಲ್ಲಿಯೇ ನೆಲೆಸಿರುವ ಕಾಫಿ ತೋಟದ ಕಾರ್ಮಿಕರಿಗೆ ಕೆಲಸ ಇಲ್ಲದೇ ಕೇವಲ ವಾರದಲ್ಲಿ ಎರಡರಿಂದ ಮೂರು ದಿನ ಕೆಲಸ ಮಾತ್ರ ದೊರೆಯುತ್ತಿದ್ದು, ಉಳಿದ ದಿನಗಳಲ್ಲಿ ಕೆಲಸವಿಲ್ಲದೇ ತೊಂದರೆ ಅನುಭವಿಸುವಂತಾಗಿದೆ ಎನ್ನುತ್ತಾರೆ ತೋಟದ ಮಾಲೀಕರು.

ಹತ್ತಾರು ವರ್ಷಗಳಿಂದ ಹುಲುಸಾಗಿ ಬೆಳೆದಿದ್ದ ಕಾಫಿ ಗಿಡಗಳು ಬರದಿಂದ ಕಣ್ಣಮುಂದೆಯೇ ಒಣಗುತ್ತಿರುವದನ್ನು ಕಂಡರೆ ನಿಜಕ್ಕೂ ಕಣ್ಣಲ್ಲಿ ನೀರು ಬರುತ್ತದೆ. ಪ್ರತಿ ವರ್ಷ ಕಾಫಿ ತೋಟಗಳ ವ್ಯಾಪ್ತಿಯಲ್ಲಿ ರೇವತಿ ಮಳೆ ಬಂದೇ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡಿದ್ದ ಕಾಫಿ ತೋಟಗಳ ಮಾಲೀಕರಿಗೆ ಈ ಬಾರಿ ರೇವತಿ ಮಳೆಯಷ್ಟೇ ಅಲ್ಲದೇ ಅಶ್ವಿನಿ, ಭರಣಿ ಮಳೆಗಳೂ ಕೈಕೊಟ್ಟ ಕಾರಣ ಕೋಟ್ಯಂತರ ನಷ್ಟ ಅನುಭವಿಸುವಂತಾಗಿದ್ದು, ಮೊದಲೇ ನಷ್ಟದಲ್ಲಿರುವ ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

- ಹರ್ಷಿತ್ ಪೂವಯ್ಯ ಮತ್ರಂಡ