ಕುಶಾಲನಗರ, ಮಾ. 21: ಕುಶಾಲನಗರ ಅಂಚೆ ಕಚೇರಿ ಇತ್ತೀಚಿನ ದಿನಗಳಲ್ಲಿ ಒತ್ತಡದ ನಡುವೆ ಕೆಲಸ ನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಠಿಯಾಗಿದೆ. ಕೇಂದ್ರ ಸರಕಾರದ ಅಧೀನದ ಕಚೇರಿಯಲ್ಲಿ ಅಂಚೆ ಬಟವಾಡೆ, ಅಂಚೆ ಉಳಿತಾಯ ನಿಧಿ ಸೇರಿದಂತೆ ಪತ್ರ ವ್ಯವಹಾರಗಳಿಗೆ ಸೀಮಿತವಾಗಿದ್ದ ಅಂಚೆ ಕಚೇರಿಯಲ್ಲಿ ಇದೀಗ ರೈಲ್ವೇ ಬುಕ್ಕಿಂಗ್, ಬ್ಯಾಂಕ್, ಎಲ್‍ಐಸಿ ಸೇರಿದಂತೆ ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮುಂತಾದ ಸೇವೆಗಳು ಕೂಡ ಒಳಗೊಂಡಿವೆ.
ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಅಂಚೆ ಕಚೇರಿಯಲ್ಲಿ ಸಿಬ್ಬಂದಿಗಳ ಕೊರತೆ ಕೂಡ ಎದುರಾಗುವದರೊಂದಿಗೆ ಅಲ್ಲಿನ ಸಿಬ್ಬಂದಿಗಳು ತಮ್ಮ ಎಂದಿನ ಕಾರ್ಯಕ್ರಮ ಬಿಟ್ಟು ಈ ಎಲ್ಲಾ ಒತ್ತಡಗಳ ನಡುವೆ ಕಾರ್ಯ ನಿರ್ವಹಿಸುವ ಪರಿಸ್ಥಿತಿ ಸೃಷ್ಠಿಯಾಗಿದೆ.
ಆಧಾರ್ ಕಾರ್ಡ್‍ಗೆಂದು ಕುಶಾಲನಗರ ಸೇರಿದಂತೆ ನೆರೆಯ ಬೈಲಕೊಪ್ಪೆ, ಕೊಪ್ಪ, ಕೊಣನೂರು ವ್ಯಾಪ್ತಿಯಿಂದ ನೂರಾರು ಜನರು ಬಂದು ಸರದಿ ಸಾಲಿನಲ್ಲಿ ನಿಲ್ಲುತ್ತಿರುವದು ಸಾಮಾನ್ಯ ದೃಶ್ಯವಾಗಿದೆ. ಬೆಳಿಗ್ಗೆ 5 ಗಂಟೆಯಿಂದಲೇ ಕಚೇರಿ ಎದುರುಗಡೆ ನಿರಾಶ್ರಿತ ಟಿಬೇಟಿಯನ್ನರು ಆಧಾರ್ ಕಾರ್ಡ್‍ಗೆ ಮುಗಿಬೀಳುತ್ತಿರುವ ದೃಶ್ಯ ವಿಶೇಷವಾಗಿದೆ.
ಈ ಎಲ್ಲಾ ಬೆಳವಣಿಗೆಯ ನಡುವೆ ಸರದಿ ಸಾಲಿನಲ್ಲಿ ನಿಂತ 10 ಮಂದಿಗೆ ಮಾತ್ರ ಆಧಾರ್ ಕಾರ್ಡ್ ನೀಡುವ ಟೋಕನ್ ನೀಡುತ್ತಿರುವದು ಉಳಿದ ಜನರಲ್ಲಿ ಅಸಮಾಧಾನ ಉಂಟುಮಾಡಿದೆ. ದಿನನಿತ್ಯ ದೂರದ ಊರುಗಳಿಂದ ಬಂದು ಹಿಂತಿರುಗುತ್ತಿರುವದು ಹಾಗೂ ತಮ್ಮ ಕೆಲಸ ಕಾರ್ಯಗಳನ್ನು ಬದಿಗೊತ್ತಿ ಬರುತ್ತಿದ್ದರೂ ತಮಗೆ ಆಧಾರ್ ಕಾರ್ಡ್ ಇನ್ನೂ ದೊರಕಿಲ್ಲ ಎನ್ನುವದು ನಾಗರಿಕರ ಅಳಲಾಗಿದೆ.
ಆಧಾರ್ ಕಾರ್ಡ್ ಸೇವೆಗೆ ನೆಮ್ಮದಿ ಕೇಂದ್ರದಲ್ಲಿ ಅವಕಾಶ ಕಲ್ಪಿಸಬೇಕೆಂದು ಇಲ್ಲಿನ ನಿವಾಸಿಯಾದ ಬಿಎಸ್‍ಎಫ್ ನಿವೃತ್ತ ಸಿಬ್ಬಂದಿ ಯಾದವರಾವ್ ಪತ್ರಿಕೆ ಮೂಲಕ ಕೋರಿದ್ದಾರೆ.
ಅಂಚೆ ಕಚೇರಿಯಲ್ಲಿ ದೈನಂದಿನ ಕೆಲಸ ಮಾಡಲು ಸಿಬ್ಬಂದಿಗಳ ಕೊರತೆಯಿದೆ. ಕಚೇರಿಯನ್ನು ಮೇಲ್ದರ್ಜೆಗೇರಿಸುವ ಅವಶ್ಯಕತೆಯೂ ಇದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ರೈಲ್ವೇ ಟಿಕೇಟ್ ಕಾದಿರಿಸಲು ಕೂಡ ದೂರದೂರಿನ ಜನ ದಿನನಿತ್ಯ ಇಲ್ಲಿ ಸರದಿ ಸಾಲಿನಲ್ಲಿ ನಿಲ್ಲುವದು ಕೂಡ ಕಂಡುಬರುತ್ತಿದೆ.
ಆದಷ್ಟು ಬೇಗನೆ ಕುಶಾಲನಗರ ಅಂಚೆ ಕಚೇರಿಯನ್ನು ಮೇಲ್ದರ್ಜೆಗೇರಿ ಸುವದರೊಂದಿಗೆ ಸಿಬ್ಬಂದಿಗಳ ಕೊರತೆ ನೀಗಿಸುವ ಮೂಲಕ ನಾಗರಿಕರಿಗೆ ಉತ್ತಮ ಸೇವೆ ನೀಡುವಲ್ಲಿ ಸಂಬಂಧಿಸಿದ ಅಧಿಕಾರಿಗಳು ಚಿಂತನೆ ಹರಿಸಬೇಕಾಗಿದೆ.
- ಚಂದ್ರಮೋಹನ್